ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೋಲ್‌ ದರ ಹೆಚ್ಚಳ: ನೈಸ್‌ ವಿರುದ್ಧ ಕ್ರಮಕ್ಕೆ ಪಿಡಬ್ಲ್ಯುಡಿ ಚಿಂತನೆ

Published : 4 ಆಗಸ್ಟ್ 2024, 23:34 IST
Last Updated : 4 ಆಗಸ್ಟ್ 2024, 23:34 IST
ಫಾಲೋ ಮಾಡಿ
Comments

ಬೆಂಗಳೂರು: ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯುಡಿ) ಅನುಮತಿ ಪಡೆಯದೇ ನೈಸ್ ರಸ್ತೆಯಲ್ಲಿ ಟೋಲ್‌ ದರಗಳನ್ನು ಹೆಚ್ಚಿಸಿರುವ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್‌) ಲಿಮಿಟೆಡ್ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ ಕಾನೂನು ಸಲಹೆ ಪಡೆಯಲು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನಿರ್ಧರಿಸಿದೆ.

ಟೋಲ್‌ ದರ ಹೆಚ್ಚಿಸುವ ಉದ್ದೇಶವನ್ನು ಇಲಾಖೆಗೆ ತಿಳಿಸದೇ, ಪರಿಷ್ಕೃತ ದರದ ಮಾಹಿತಿಯನ್ನು ಹಂಚಿಕೊಳ್ಳದೇ ಪೆರಿಫೆರಲ್ ಮತ್ತು ಲಿಂಕ್ ರಸ್ತೆಗಳಿಗೆ ದರ ಹೆಚ್ಚಿಸಲಾಗಿದೆ. ಟೋಲ್‌ ದರ ಪರಿಷ್ಕರಣೆಯಲ್ಲಿ ಈ ಖಾಸಗಿ ಸಂಸ್ಥೆಯು ಇಲಾಖೆಯೊಂದಿಗಿನ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಇಲಾಖೆಯ ಮೂಲಗಳು ಹೇಳಿವೆ.

ಟೋಲ್‌ ದರದ ಬಗ್ಗೆ ನೈಸ್‌ ಸಂಸ್ಥೆಯು 2020ರಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ದರ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಅದರ ವಿವರಗಳನ್ನು ಪಿಡಬ್ಲ್ಯುಡಿಗೆ ತಿಳಿಸಿ, ಒಪ್ಪಿಗೆ ಪಡೆಯಬೇಕು. ಅನುಮತಿಗಾಗಿ ಅರ್ಜಿ ಸಲ್ಲಿಸಿ 30 ದಿನಗಳಲ್ಲಿ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದರೆ ಮಾತ್ರ ನೇರವಾಗಿ ದರ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಆದರೆ, ನೈಸ್‌ ಸಂಸ್ಥೆಯು ಪಿಡಬ್ಲ್ಯುಡಿ ಜತೆಗೆ ಯಾವುದೇ ಸಂವಹನ ನಡೆಸಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈ 1ರಿಂದ 44 ಕಿಲೋಮೀಟರ್‌ ಉದ್ದದ ಏಳು ರಸ್ತೆಗಳಲ್ಲಿ ನೈಸ್‌ ಸಂಸ್ಥೆಯು ಕಾರುಗಳಿಗೆ ₹ 5ರಿಂದ ₹ 10 ವರೆಗೆ ಟೋಲ್‌ ಶುಲ್ಕ ಹೆಚ್ಚಳ ಮಾಡಿದೆ. 9 ಕಿ.ಮೀ. ಉದ್ದದ ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆಯಲ್ಲಿ ₹ 10 ಹೆಚ್ಚಳ ಮಾಡಿರುವುದರಿಂದ ಕಾರುಗಳಿಗೆ ಟೋಲ್‌ ₹ 60ಕ್ಕೇರಿದೆ. ಬನ್ನೇರುಘಟ್ಟ ರಸ್ತೆ–ಕನಕಪುರ ರಸ್ತೆ ಮಧ್ಯದ 6.79 ಕಿ.ಮೀ.ಗೆ ₹ 5 ಹೆಚ್ಚಳವಾಗಿದೆ. ₹ 40 ಇದ್ದ ದರವು ಪರಿಷ್ಕೃತಗೊಂಡ ಬಳಿಕ ₹ 45ಕ್ಕೇರಿದೆ. ದ್ವಿಚಕ್ರ ವಾಹನಗಳ ಟೋಲ್‌ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ.

ನೈಸ್ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸದೇ ಇರುವ ಬಗ್ಗೆ, ಒಪ್ಪಂದವನ್ನು ಅನುಸರಿಸದೇ ಇರುವ ಬಗ್ಗೆ 2016ರ ಫೆಬ್ರುವರಿಯಲ್ಲಿ ನೈಸ್ ಸಂಸ್ಥೆಗೆ ಪಿಡಬ್ಲ್ಯುಡಿ ನೋಟಿಸ್‌ ನೀಡಿತ್ತು. ಅದನ್ನು ನೈಸ್‌ ಸಂಸ್ಥೆಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇದೇ ಸಮಯದಲ್ಲಿ ದರ ಪರಿಷ್ಕರಣೆ ನಡೆದಿದೆ.

ಎಂಟು ವರ್ಷಗಳಿಂದ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗ ನೈಸ್‌ ಕಂಪನಿಯು ಹಲವು ಬಾರಿ ಟೋಲ್ ದರ ಹೆಚ್ಚಳ ಮಾಡಿದ್ದರೂ ಸರ್ಕಾರವು ಕಂಪನಿ ಮೇಲೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಬಾರಿ ಜುಲೈಯಲ್ಲಿ ದರ ಹೆಚ್ಚಳ ಮಾಡುವ ಮೊದಲು ನೈಸ್‌ ಸಂಸ್ಥೆಯು ಟೋಲ್‌ ಶುಲ್ಕದ ಮೂಲಕ ದಿನಕ್ಕೆ ₹ 1.5 ಕೋಟಿ ಸಂಗ್ರಹ ಮಾಡುತ್ತಿತ್ತು. ಇನ್ನು ಸುಂಕ ಸಂಗ್ರಹ ಇನ್ನಷ್ಟು ಹೆಚ್ಚಳವಾಗಲಿದೆ.

ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆಗೆ ನೈಸ್‌ ಕಂಪನಿಯ ಪ್ರತಿನಿಧಿಗಳು ಲಭ್ಯರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT