ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆ: 5 ವರ್ಷಗಳ ಹಳೆಯ ಬಿಲ್‌ಗಳಿಗೆ ಮುಕ್ತಿ

Published 17 ಆಗಸ್ಟ್ 2023, 22:55 IST
Last Updated 17 ಆಗಸ್ಟ್ 2023, 23:36 IST
ಅಕ್ಷರ ಗಾತ್ರ

––ವಿ.ಎಸ್‌. ಸುಬ್ರಹ್ಮಣ್ಯ

ಬಿಲ್‌ ಪಾವತಿಗೆ ಕಮಿಷನ್‌ ಬೇಡಿಕೆ ವಿಚಾರ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿತ್ತು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಇದೇ ಆರೋಪ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಮಧ್ಯದಲ್ಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ₹ 1,200 ಕೋಟಿ ಮೊತ್ತದ ಬಿಲ್‌ ಪಾವತಿಸಿರುವ ಲೋಕೋಪಯೋಗಿ ಇಲಾಖೆಯು, ಜ್ಯೇಷ್ಠತೆ ಉಲ್ಲಂಘನೆಗೆ ಕಡಿವಾಣ ಹಾಕಿದೆ.

ಲೋಕೋಪಯೋಗಿ ಇಲಾಖೆಯ ವಿವಿಧ ವಿಭಾಗಗಳ ಮೂಲಕ ರಾಜ್ಯ ಹೆದ್ದಾರಿಗಳ ಸುಧಾರಣೆ, ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ, ನಿರ್ವಹಣಾ ಕಾಮಗಾರಿ, ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಬಾಬ್ತು ₹ 800 ಕೋಟಿ ಬಿಲ್‌ ಪಾವತಿಸಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಮತ್ತು ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣಾ ಯೋಜನೆ (ಕೆಶಿಪ್‌) ಬಿಲ್‌ಗಳೂ ಸೇರಿದಂತೆ ಒಟ್ಟು ಮೊತ್ತ ₹ 1,200 ಕೋಟಿ ತಲುಪಿದೆ.

ಸಚಿವರ ಬಿಗಿ ಪಟ್ಟು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಾಕಿ ಬಿಲ್‌ ಪಾವತಿಗಾಗಿ ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳಿಗೆ ಒಂದು ಕಂತಿನ ಅನುದಾನ ಬಿಡುಗಡೆ ಮಾಡಿತ್ತು. ಜಲ ಸಂಪನ್ಮೂಲ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಇನ್ನೂ ಬಿಲ್‌ ಪಾವತಿಯೇ ಆಗಿಲ್ಲ. ಆದರೆ, ಅನುದಾನ ಬರುವ ಮೊದಲೇ ಬಾಕಿ ಬಿಲ್‌ಗಳ ಜ್ಯೇಷ್ಠತಾ ಪಟ್ಟಿಯನ್ನು ಸಂಗ್ರಹಿಸುವಂತೆ ಸೂಚಿಸಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಅದರ ಅನುಸಾರವೇ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘2016–17ರಲ್ಲಿ ನಡೆದಿದ್ದ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯ ಕೆಲವು ಕಾಮಗಾರಿಗಳ ಬಿಲ್‌ಗಳು ಇನ್ನೂ ಬಾಕಿ ಇದ್ದವು. ಸಚಿವರ ಸೂಚನೆಯಂತೆ ಈ ಲೆಕ್ಕ ಶೀರ್ಷಿಕೆಯಡಿ 2020–21ರ ಅವಧಿಯವರೆಗಿನ ಬಾಕಿ ಬಿಲ್‌ಗಳನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ. ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗಳ 2019–20ರ ಎಲ್ಲ ಬಿಲ್‌ಗಳನ್ನು ಪಾವತಿಸಿದ್ದು, 2020–21ರ ಅವಧಿಯ ಬಿಲ್‌ಗಳಲ್ಲಿ ಶೇಕಡ 50ರಷ್ಟನ್ನು ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ.

ತಂತ್ರಾಂಶ ಅಳವಡಿಕೆಗೆ ಸಿದ್ಧತೆ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಬಾಕಿ ಬಿಲ್‌ ಪಾವತಿಸುವುದಕ್ಕಾಗಿ ತಂತ್ರಾಂಶವೊಂದನ್ನು ಅಳವಡಿಸುವಂತೆ ಗುತ್ತಿಗೆದಾರರ ಸಂಘ ಹಲವು ವರ್ಷಗಳಿಂದಲೂ ಬೇಡಿಕೆ ಇಟ್ಟಿತ್ತು. ಈಗ ಲೋಕೋಪಯೋಗಿ ಇಲಾಖೆ ತಂತ್ರಾಂಶ ಅಳವಡಿಕೆಗೆ ಮುಂದಾಗಿದೆ.

‘ಸಚಿವರ ಸೂಚನೆಯಂತೆ ತಂತ್ರಾಂಶ ರೂಪಿಸಲಾಗುತ್ತಿದೆ. ಅಂತಿಮ ಹಂತದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಕಂತಿನ ಬಿಲ್‌ ಪಾವತಿಗೆ ಜ್ಯೇಷ್ಠತೆ ನಿರ್ಧರಿಸಲು ತಂತ್ರಾಂಶ ಬಳಸುವ ಸಾಧ್ಯತೆ ಇದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಬಿಲ್‌ ಪಾವತಿಯಲ್ಲಿ ಜ್ಯೇಷ್ಠತೆ ಕಾಯ್ದುಕೊಳ್ಳುವ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಸಚಿವರೊಬ್ಬರು ಸ್ಪಂದಿಸಿದ್ದಾರೆ. ಸತೀಶ ಜಾರಕಿಹೊಳಿ ಅವರ ನಿರ್ಧಾರದಿಂದ ಎಲ್ಲ ಗುತ್ತಿಗೆದಾರರಿಗೂ ನ್ಯಾಯ ದೊರಕುವ ಭರವಸೆ ಮೂಡಿದೆ.
–ಡಿ. ಕೆಂಪಣ್ಣ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ

2001ರಲ್ಲೇ ಆದೇಶ

ವಿವಿಧ ಇಲಾಖೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಾಬ್ತು ಗುತ್ತಿಗೆದಾರರಿಗೆ ಜ್ಯೇಷ್ಠತೆ ಆಧಾರದಲ್ಲಿ ಬಿಲ್‌ ಪಾವತಿ ಕಡ್ಡಾಯಗೊಳಿಸಿ 2001ರಲ್ಲೇ ಆದೇಶ ಹೊರಡಿಸಲಾಗಿತ್ತು.

‘ಬಿಡುಗಡೆಯಾಗುವ ಮೊತ್ತದಲ್ಲಿ ಶೇಕಡ 80ರಷ್ಟನ್ನು ಜ್ಯೇಷ್ಠತೆ ಆಧಾರದಲ್ಲಿ ಪಾವತಿಸಬೇಕು. ಶೇ 20ರಷ್ಟು ಮೊತ್ತವನ್ನು ತುರ್ತು ಕಾಮಗಾರಿಗಳ ನಿರ್ವಹಣೆ, ನ್ಯಾಯಾಲಯದ ಆದೇಶ ಹಾಗೂ ಗುತ್ತಿಗೆದಾರರ ಕುಟುಂಬದ ಮದುವೆ, ಅನಾರೋಗ್ಯ ಮತ್ತಿತರ ವೈಯಕ್ತಿಕ ಅನಿವಾರ್ಯ ಕಾರಣಗಳ ಆಧಾರದಲ್ಲಿ ಪಾವತಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

‘ಜ್ಯೇಷ್ಠತೆ ಉಲ್ಲಂಘನೆಗೆ ಅವಕಾಶವಿಲ್ಲ’

‘ಲೋಕೋಪಯೋಗಿ ಇಲಾಖೆಯಲ್ಲಿ ಬಾಕಿ ಇರುವ ಬಿಲ್‌ಗಳ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಐದು ವರ್ಷಗಳ ಹಿಂದಿನಿಂದ ಬಾಕಿ ಉಳಿದಿದ್ದ ಬಿಲ್‌ಗಳನ್ನು ಮೊದಲ ಹಂತದಲ್ಲಿ ಪಾವತಿಸಲಾಗಿದೆ. ಮುಂದಿನ ದಿನಗಳಲ್ಲೂ ಜ್ಯೇಷ್ಠತೆ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಗುತ್ತಿಗೆದಾರರ ಸಂಘದ ಪ್ರತಿನಿಧಿಗಳ ಅಹವಾಲು ಆಲಿಸಿದ್ದೇನೆ. ಅಧಿಕಾರಿಗಳಿಂದಲೂ ಸಲಹೆ ಪಡೆದಿದ್ದೇನೆ. ಯಾವುದೇ ರೀತಿಯಲ್ಲೂ ಆರೋಪಕ್ಕೆ ಅವಕಾಶವಿಲ್ಲದಂತೆ ಬಿಲ್‌ ಪಾವತಿ ಪ್ರಕ್ರಿಯೆ ನಿರ್ವಹಿಸಲು ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT