ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹120 ಕೋಟಿ ಕೆಲಸ: ಎಂಜಿನಿಯರುಗಳೇ ಬೇನಾಮಿ

ರಾಜಧಾನಿಯ ಪ್ರಮುಖ ಕಟ್ಟಡಗಳ ನಿರ್ವಹಣೆಯಲ್ಲಿ ‘ಅಕ್ರಮ’?
Published 19 ಅಕ್ಟೋಬರ್ 2023, 0:30 IST
Last Updated 19 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಪ್ರಮುಖ ಕಟ್ಟಡಗಳ ನಿರ್ವಹಣೆಯ ಹೊಣೆ ಹೊತ್ತ ಲೋಕೋಪಯೋಗಿ ಇಲಾಖೆಯ ನಂ.1 ಕಟ್ಟಡಗಳ ವಿಭಾಗದಲ್ಲಿ ವಾರ್ಷಿಕ ₹120 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿ ನಡೆಯುತ್ತಿದ್ದು, ಎಂಜಿನಿಯರುಗಳೇ ತಮ್ಮ ನೆಂಟರಿಷ್ಟರ ಹೆಸರಿನಲ್ಲಿ ಬೇನಾಮಿ ನಡೆಸುತ್ತಿದ್ದಾರೆ ಎಂದು ಗುತ್ತಿಗೆದಾರರು ದೂರಿದ್ದಾರೆ.

‘ಪ್ರಮುಖ ಕಟ್ಟಡಗಳ ಸುಣ್ಣ–ಬಣ್ಣ, ಶೌಚಾಲಯಗಳ ನಿರ್ವಹಣೆ, ವಿದ್ಯುತ್‌ ಪರಿಕರಗಳು, ಶೌಚಾಲಯ, ಆಲಂಕಾರಿಕ ಸಾಮಗ್ರಿಗಳು ಹೀಗೆ ಎಲ್ಲವೂ ಈ ವಿಭಾಗದ ವ್ಯಾಪ್ತಿಯಲ್ಲಿದೆ. ಸರ್ಕಾರದ ಪ್ರಮುಖರ ವಸತಿಗೃಹ, ಕಚೇರಿಗಳ ನಿರ್ವಹಣೆ ಆಯಾ ಸಚಿವರ ಆಸಕ್ತಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಹೀಗಾಗಿ, ಟೆಂಡರ್ ಕರೆಯದೇ ‘ತುರ್ತು ಕಾಮಗಾರಿ’ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಬಳಿಕ, ಹೊಸ ಕಾಮಗಾರಿಯ ಬಿಲ್ ಮಾಡುವಾಗ ‘ಹೊಂದಾಣಿಕೆ’ಗಾಗಿ ಹಿಂದಿನ ವರ್ಷದ ಕಾಮಗಾರಿಗಳನ್ನು ಸೇರಿಸಿ ಬಿಲ್ ಮಾಡುವ ಪದ್ಧತಿಯೂ ಇದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು.

ತುರ್ತು ಕಾಮಗಾರಿ ಹೆಸರಿನಲ್ಲಿ ಯಾವಾಗ ಬೇಕಾದರೂ ಕೆಲಸ ನಡೆಸುವ, ಸಂಸದರು– ಶಾಸಕರ ಕಾಟವಿಲ್ಲದೇ ಬಿಲ್‌ ಮಾಡುವ ಅವಕಾಶ ಇರುವ ನಂ.1 ಕಟ್ಟಡ ವಿಭಾಗದ ಕಾರ್ಯಪಾಲಕ ಎಂಜಿನಿಯರ್(ಇ.ಇ) ಹುದ್ದೆಯೂ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಹುದ್ದೆಗಿಂತ ಪ್ರಭಾವಶಾಲಿಯಾದುದು.

ಈ ಹುದ್ದೆಯಲ್ಲಿ ಎರಡು ವರ್ಷದಿಂದ ಇರುವ ಪ್ರಕಾಶ್‌, ತಮ್ಮ ಕಾರ್ಯಾವಧಿಯ ಉದ್ದಕ್ಕೂ ಬೆಂಗಳೂರಿನಲ್ಲೇ ಇರುವ ನಂ.1 ಮತ್ತು ನಂ.2 ವಿಭಾಗದಲ್ಲೇ ಇದ್ದಾರೆ. ನಂ.2 ವಿಭಾಗದ ನಂ.8 ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್(ಎಇ) ಆಗಿ ಸೇರಿದ ಇವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌(ಎಇಇ) ಹುದ್ದೆಗೆ ಬಡ್ತಿ ಪಡೆದು ನಂ.8ರ ಉಪವಿಭಾಗಕ್ಕೆ ಬಂದರು. ಅಲ್ಲಿಂದ ನಂ.1 ಕಟ್ಟಡ ವಿಭಾಗದ ನಂ.6 ಉಪವಿಭಾಗಕ್ಕೆ ವರ್ಗಾವಣೆಯಾಗಿ, ಬಳಿಕ ನಂ.1 ಇ.ಇ. ಬಡ್ತಿ ಪಡೆದರು. ಕೆಳಹಂತದಿಂದ ಬಂದ ಇವರು, ತಮ್ಮ ಸಂಬಂಧಿಗಳ ಹೆಸರಿನಲ್ಲಿ ಬೇನಾಮಿ ಗುತ್ತಿಗೆ ನಡೆಸುತ್ತಾರೆ ಎಂದು ಗುತ್ತಿಗೆದಾರರು ದೂರಿದ್ದಾರೆ.

ಕಡಿಮೆ ದರದ ಬಿಡ್‌:

ನಿರ್ವಹಣೆಯ ಗುತ್ತಿಗೆಯನ್ನು ನಿಯಮದಂತೆ ಕರೆಯಲಾಗುತ್ತದೆ. ಆದರೆ, ಕಾರ್ಯಾದೇಶ ನೀಡುವಾಗ ನಿಯಮವನ್ನು ಉಲ್ಲಂಘಿಸಲಾಗಿದೆ. ನಿಯಮದಂತೆ ಕಡಿಮೆ ದರ ನಮೂದಿಸಿದವರಿಗೆ ಟೆಂಡರ್‌ ನೀಡಬೇಕು. ಇ–ಪ್ರೊಕ್ಯೂರ್‌ಮೆಂಟ್‌ ಜಾಲತಾಣದಲ್ಲಿ ಕರೆದ ಟೆಂಡರ್‌ಗೆ ಹೊರಗಿನ ಗುತ್ತಿಗೆದಾರರು ಹಾಕಿದ ಮೊತ್ತಕ್ಕಿಂತ ತಮ್ಮ ಸಂಬಂಧಿಗಳು, ಆಪ್ತರಾದ ಸಂಜಯದೀಪ್‌, ಮನೀಷ್‌ ಹಾಗೂ ಶ್ರೀಕಾಂತ್ ಹೆಸರಿನಲ್ಲಿ ಬಿಡ್‌ ಮಾಡಿಸಿದ್ದರು. ಟೆಂಡರ್‌ಗೆ ಅರ್ಜಿ ಸಲ್ಲಿಸುವಾಗ, ಗುತ್ತಿಗೆ ಅರ್ಹತೆಗಾಗಿ ಹಿಂದೆ ನಿರ್ವಹಿಸಿದ ಅದೇ ಮಾದರಿಯ ಕಾಮಗಾರಿಯ ದೃಢೀಕರಣ ಪತ್ರ (ವರ್ಕ್‌ಡನ್ ಸರ್ಟಿಫಿಕೇಟ್‌) ಲಗತ್ತಿಸಿರಬೇಕು. ನಂ.1 ಕಟ್ಟಡ ವಿಭಾಗದಲ್ಲಿ ಈ ದೃಢೀಕರಣ ಪತ್ರ ನೀಡದೇ ಇರುವವರಿಗೆ ಟೆಂಡರ್‌ ನೀಡಿರುವ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಇಲ್ಲಿಯವರೆಗೆ ಬೇನಾಮಿ ಹೆಸರಿನಲ್ಲಿ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದ ಈ ವಿಭಾಗದಲ್ಲಿ, ವಿಧಾನಸೌಧದ ಪೂರ್ಣ ನಿರ್ವಹಣೆಯನ್ನು ಕೆಟಿಪಿಪಿ ಕಾಯ್ದೆಯಡಿ ಸೆಕ್ಷನ್ 4–ಜಿ ಅಡಿಯಲ್ಲಿ ವಿನಾಯ್ತಿ ನೀಡುವ ಆದೇಶ ತರುವ ಯತ್ನ ನಡೆಯುತ್ತಿದೆ ಎಂಬ ದೂರುಗಳಿವೆ. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಕಾಶ್‌ ಅವರಿಗೆ ಕರೆ ಮಾಡಿದರೆ ಅವರ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT