ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ ನಡೆಸುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ: ದೂರು

ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರಿಂದ ಪ್ರತಿಭಟನೆ
Last Updated 24 ಫೆಬ್ರುವರಿ 2021, 21:59 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ : ಚಿಕ್ಕಗೊಲ್ಲರಹಟ್ಟಿಯ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ತೆರೆದಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಮೇಲೆ ಬಾರ್ ಮಾಲೀಕರು ಗೂಂಡಾಗಳನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ.

ಬಿ.ಎನ್.ಸರಸ್ವತಿ ಎಂಬುವರು ತೀವ್ರಗಾಯಗೊಂಡಿದ್ದು, ಗ್ರಾಮಪಂಚಾಯ್ತಿ ಬಿಜೆಪಿ ಸದಸ್ಯೆ ಕೋಮಲ, ಲಿಂಗಮ್ಮ, ಲಕ್ಷ್ಮಮ್ಮ ಎಂಬುವರ ಮೇಲೆಯೂ ಹಲ್ಲೆ ನಡೆದಿದೆ. ತಾವರೆಕೆರೆ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗಿದ್ದು, ಬಾರ್ ಮಾಲೀಕ ಶ್ರೀನಿವಾಸಯ್ಯ ಮತ್ತು ಮಕ್ಕಳು ಸಹಚರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬ್ಯಾಟರಾಯನಪುರದ ಅಬಕಾರಿ ಉಪ ಆಯುಕ್ತರ ಕಚೇರಿ ಮುಂಭಾಗ ಗುರುವಾರ ಧರಣಿಸಿ ನಡೆಸಿದ ನೂರಾರು ಮಹಿಳೆಯರು, ‘ಯಾವುದೇ ಕಾರಣಕ್ಕೂ ವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು. ಒಂದು ವೇಳೆ ತೆರೆದರೆ ನಮ್ಮ ಹೆಣಗಳ ಮೇಲೆ ತೆರೆಯಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಈ ಪ್ರದೇಶದಲ್ಲಿ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಯಿಂದ ಅನುಮತಿ ನೀಡಿಲ್ಲ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿರೋಧ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರೂ ಅಬಕಾರಿ ಉಪಆಯುಕ್ತರ ಮುಂದೆ ಕೇಸು ನಡೆಯುತ್ತಿದ್ದರೂ ಏಕಾಏಕಿ ಬಾರ್ ತೆರೆದಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ’ ಎಂದು ಪಂಚಾಯಿತಿ ಸದಸ್ಯರಾದ ಕೋಮಲ, ಸಿದ್ಧಗಂಗಮ್ಮ, ತಮ್ಮಯ್ಯ, ಜಯಣ್ಣ, ಚಿಕ್ಕಣ್ಣ ಆರೋಪಿಸಿದರು.

ಹಿರಿಯ ವಕೀಲ ಜಿ.ಕೆ.ಭಟ್, ‘ಬಾರ್ ಮಾಲೀಕರು ಅಕ್ರಮವಾಗಿ ಅಂಗಡಿ ತೆರೆದಿದ್ದಾರೆ. ಸರ್ಕಾರಕ್ಕೆ ನೀಡಬೇಕಾದ ತೆರಿಗೆಯನ್ನೂ ಕಟ್ಟಿಲ್ಲ. ಪಂಚಾಯಿತಿ ಪರವಾನಗಿಯೂ ನೀಡಿಲ್ಲ’ ಎಂದರು.

‘ಮಹಿಳೆಯರ ಮೇಲೆ ಹಲ್ಲೆ ಮಾಡಿರುವವರು ತಲೆ ಮರೆಸಿಕೊಂಡಿದ್ದಾರೆ. ಬಾರ್‌ ಮಾಲೀಕರು ಗುರುವಾರ ವಿಚಾರಣೆಗೆ ಗೈರು ಹಾಜರಾಗಿದ್ದರು’ ಎಂದರು.

ಅಬಕಾರಿ ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ್, ‘ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT