ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್ ವಿವಿ: ಆರ್‌–ಸ್ಯಾಟ್ ಉಪಗ್ರಹ ಉಡಾವಣೆಗೆ ಸಿದ್ಧ

ಹಡಗುಗಳ ಮೇಲೆ ನಿಗಾ ಇಡಲು ಉಪಗ್ರಹ ಸಹಾಯಕ
Last Updated 17 ಫೆಬ್ರುವರಿ 2021, 22:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾಲಯವು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಸಹಯೋಗದಲ್ಲಿ ಆರ್‌–ಸ್ಯಾಟ್‌ ಉಪಗ್ರಹ ಸಿದ್ಧಪಡಿಸಿದ್ದು, ಇದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇದೇ 28ಕ್ಕೆ ಉಡಾವಣೆಯಾಗಲಿದೆ.

ಇಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ‘2016ರಲ್ಲಿ ಪಿ-ಸ್ಯಾಟ್ ಉಪಗ್ರಹ ರೂಪಿಸಿ, ಇಸ್ರೊಗೆ ಹಸ್ತಾಂತರ ಮಾಡಿದ್ದೇವು. ಇದರ ಯಶಸ್ಸಿನಿಂದ ಡಿಆರ್‌ಡಿಒ ಅವರು ಉಪಗ್ರಹ ರೂಪಿಸಿಕೊಡುವಂತೆ ಮನವಿ ಮಾಡಿದ್ದರು. ನಮ್ಮಲ್ಲಿನ ವಿಜ್ಞಾನಿ ಡಾ. ಶಾಂಬಶಿವ ರಾವ್ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿಮೂರು ವರ್ಷದ ಅವಧಿಯಲ್ಲಿ ಈ ಉಪಗ್ರಹವನ್ನು ವಿನ್ಯಾಸ ಮಾಡಿದ್ದಾರೆ. ಇದನ್ನು ಡಿಆರ್‌ಡಿಒಗೆ ಹಸ್ತಾಂತರ ಮಾಡಲಾಗುತ್ತದೆ. ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಹಡಗುಗಳ ಚಲನೆಯ ಮೇಲೆ ಇದು ನಿಗಾ ಇಡಲಿದೆ’ ಎಂದು ತಿಳಿಸಿದರು.

‘ಮೈಕ್ರೊ ಉಪಗ್ರಹವಾಗಿರುವ ಆರ್-ಸ್ಯಾಟ್ 15 ಕೆ.ಜಿ. ತೂಕವಿದ್ದು, 45 ವಾಟ್ ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರದಲ್ಲಿ ಸಾಗುವ ನೌಕೆಗಳ ಮೇಲೆ ಈ ಉಪಗ್ರಹ ನಿಗಾ ಇರಿಸಲಿದೆ. ನೌಕೆಗಳಲ್ಲಿರುವ ‘ಸ್ವಯಂ ಪತ್ತೆ ಸಾಧನ’ದ ತರಂಗ ಗ್ರಹಿಸಿ ಕೇಂದ್ರಕ್ಕೆ ರವಾನಿಸುತ್ತದೆ. ಇದಕ್ಕ ಡಿಆರ್‌ಡಿಒ ₹ 2.2 ಕೋಟಿ ಧನಸಹಾಯ ನೀಡಿದೆ’ ಎಂದು ವಿವರಿಸಿದರು.

2 ವರ್ಷ ಆಯಸ್ಸು: ವಿಜ್ಞಾನಿ ಡಾ. ಸಾಂಬಶಿವ ರಾವ್ ಮಾತನಾಡಿ, ‘ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿಯೇ ಇದನ್ನು ವಿನ್ಯಾಸ ಮಾಡಲಾಗಿದೆ. ಈ ಉಪಗ್ರಹದ ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಉಡಾವಣೆಗೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಇದರ ಆಯಸ್ಸು ಕನಿಷ್ಠ ಎರಡು ವರ್ಷ ಎಂದು ಲೆಕ್ಕ ಹಾಕಲಾಗಿದೆ. ಸಮುದ್ರ ಪ್ರದೇಶಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆ ಮಾಡಲು ಇದು ಸಹಕಾರಿ’ ಎಂದು ತಿಳಿಸಿದರು.

‘ಪ್ರತಿ ಹಡಗಿನ ಚಲನವಲನದ ಮಾಹಿತಿಯನ್ನು ಒದಗಿಸಲಿದೆ. ಸೋಲಾರ್ ಫಲಕಗಳು, ಬ್ಯಾಟರಿ, ಆಂಟೇನಾ ಸೇರಿದಂತೆ ವಿವಿಧ ಉಪಕರಣಗಳನ್ನು ಒಳಗೊಂಡಿದೆ. ಉಡಾವಣೆಯಾದ ಒಂದೂವರೆ ಗಂಟೆಯಲ್ಲಿ ಉಪಗ್ರಹವು ಕಕ್ಷೆ ಸೇರಲಿದೆ. ಒಂದು ದಿನದ ಬಳಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ’ ಎಂದು ಹೇಳಿದರು.

ಉಪಗ್ರಹ ಸಿದ್ಧಗೊಳಿಸಿದ ತಂಡ
* ಡಾ. ಶಾಂಬಶಿವ ರಾವ್
* ಡಾ.ಜಿ. ನಾಗೇಂದ್ರ ರಾವ್
* ಡಾ.ಎಸ್.ವಿ. ವೇಣುಗೋಪಾಲ್
* ಡಾ.ವಿ. ಕೇಶವ್ ರಾಜು
* ಪ್ರೊ.ಸಿ. ಬಂಗಾರ ರಾಜು
* ಪ್ರೊ.ಎಸ್. ನಾಗಭೂಷಣಮ್
* ಪ್ರೊ. ಮಹೇಂದ್ರ ನಾಯಕ್
* ಪ್ರೊ. ಪ್ರಿಯಾಂಕಾ ಅಗರ್ವಾಲ್
* ಯೋಗೇಶ್ ಎಂ.
* ಪರ್ವೇಜ್ ಮಹಮ್ಮದ್
* ಕಾವ್ಯಶ್ರೀ
* ಅಜಿತ್ ಕುಮಾರ್
* ಮಹಾಂತೇಶ್
* ಅಬ್ದುಲ್
* ಅಭಿರಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT