ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಾದ್ರಿಪುರ ಬಳಿ ರೈಲು ನಿಲ್ಲಿಸಿದಾಗ ನಕಲಿ ಪಿಸ್ತೂಲ್ ತೋರಿಸಿ ಪ್ರಯಾಣಿಕರ ಸುಲಿಗೆ

ಪೊಲೀಸರಿಂದ ಇಬ್ಬರ ಬಂಧನ, ₹ 3 ಲಕ್ಷ ಮೌಲ್ಯದ ಆಭರಣ ಜಪ್ತಿ
Last Updated 9 ಸೆಪ್ಟೆಂಬರ್ 2021, 16:40 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆಯೊಡ್ಡಿ ರೈಲು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ರವಿ ಸಿಂಗ್ (27) ಹಾಗೂ ಉತ್ತರ ಪ್ರದೇಶದ ಸಂದೀಪ್ ಅಲಿಯಾಸ್ ರಜಪೂತ್ ಸಿಂಗ್ (32) ಬಂಧಿತರು. ಅವರಿಂದ ಸುಮಾರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಕಲಿ ಪಿಸ್ತೂಲ್ ಜಪ್ತಿ ಮಾಡಲಾಗಿದೆ’ ಎಂದು ಬೆಂಗಳೂರು ರೈಲ್ವೆ ಪೊಲೀಸರು ಹೇಳಿದರು.

‘ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆರೋಪಿಗಳು, ಬಾರ್, ಗ್ಯಾರೇಜ್ ಹಾಗೂ ಇತರೆಡೆ ಕೆಲಸ ಮಾಡುತ್ತಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಆರೋಪಿಗಳು, ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ನಕಲಿ ಪಿಸ್ತೂಲ್ ಖರೀದಿಸಿದ್ದರು’ ಎಂದೂ ತಿಳಿಸಿದರು.

ಮೂರು ಬಾರಿ ಕೃತ್ಯ: ‘ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಜಾಗವಿಲ್ಲದಿದ್ದಾಗ, ತುಮಕೂರು ಕಡೆಯಿಂದ ಬರುವ ರೈಲುಗಳನ್ನು ಶೇಷಾದ್ರಿಪುರ ಬಳಿ ಕೆಲ ನಿಮಿಷ ನಿಲ್ಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬೋಗಿ ಏರುತ್ತಿದ್ದ ಆರೋಪಿಗಳು, ಒಂಟಿಯಾಗಿದ್ದವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆ. 22, 25 ಹಾಗೂ 30ರಂದು ಆರೋಪಿಗಳು ಕೃತ್ಯ ಎಸಗಿದ್ದರು. ಈ ಬಗ್ಗೆ ಪ್ರಕರಣಗಳೂ ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಹೇಳಿದರು.

ಮಹಿಳೆಯರೇ ಗುರಿ: ‘ಬೋಗಿಯಲ್ಲಿ ಇರುತ್ತಿದ್ದ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಮಹಿಳೆಯರ ಹಣೆಗೆ ನಕಲಿ ಪಿಸ್ತೂಲ್ ಹಿಡಿದು, 10 ಎಣಿಸುವ ಮುಂಚೆ ಚಿನ್ನಾಭರಣ ಹಾಗೂ ನಗದು ನೀಡುವಂತೆ ಒತ್ತಾಯಿಸುತ್ತಿದ್ದರು. ಜೀವಭಯದಿಂದ ಮಹಿಳೆಯರು, ಚಿನ್ನಾಭರಣ ಬಿಚ್ಚಿ ಕೊಡುತ್ತಿದ್ದರು. ವಿರೋಧ ವ್ಯಕ್ತಪಡಿಸಿದರೆ, ಆರೋಪಿಗಳೇ ಚಿನ್ನಾಭರಣ ಕಿತ್ತುಕೊಳ್ಳುತ್ತಿದ್ದರು’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT