ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಿಂದ ಹೊರಗೆಳೆದು ದರೋಡೆ! ಸಿಗ್ನಲ್ ಕಂಬ ಏರಿ ಕೃತ್ಯ ಪ್ರಯಾಣಿಕನ ಸ್ಥಿತಿ ಗಂಭೀರ

Last Updated 29 ಜುಲೈ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಅರಸೀಕೆರೆಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿ.ಆರ್‌.ಸತೀಶ್ ಎಂಬುವರ ಮೊಬೈಲ್‌ಗಳನ್ನು ದೋಚಿರುವ ದುಷ್ಕರ್ಮಿಗಳಿಬ್ಬರು, ಸತೀಶ್ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಳೆದು ಪರಾರಿಯಾಗಿದ್ದಾರೆ.

ಇದೇ 22ರಂದು ನಡೆದಿರುವ ಘಟನೆಯಿಂದ ತೀವ್ರ ಗಾಯಗೊಂಡಿರುವ ಸತೀಶ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ನಗರ ರೈಲು ನಿಲ್ದಾಣದ ಪೊಲೀಸರು, ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ.

‘ತುಮಕೂರು ಜಯನಗರ ನಿವಾಸಿಯಾದ ಸತೀಶ್, ಕೆಲಸ ನಿಮಿತ್ತ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್‌ ಅರಸೀಕೆರೆ ಪ್ಯಾಸೆಂಜರ್ ರೈಲಿನಲ್ಲಿ ಇದೇ 22ರಂದು ಸಂಜೆ ಊರಿಗೆ ಹೊರಟಿದ್ದಾಗಲೇ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ರೈಲು ನಿಧಾನವಾಗಿ ಹೊರಟಿತ್ತು.ಸತೀಶ್ ಅವರು ಬಾಗಿಲು ಬಳಿ ನಿಂತಿದ್ದರು. ರೈಲು ಹಳಿ ಪಕ್ಕದ ಸಿಗ್ನಲ್ ಕಂಬ ಏರಿ ನಿಂತಿದ್ದ ದುಷ್ಕರ್ಮಿಗಳಿಬ್ಬರು, ಏಕಾಏಕಿ ಸತೀಶ್ ಅವರ ಜೇಬಿಗೆ ಕೈ ಹಾಕಿ ಮೊಬೈಲ್‌ ಕಿತ್ತುಕೊಂಡು ಹೊರಗೆ ಎಳೆದಿದ್ದರು. ಅಷ್ಟರಲ್ಲೇ ರೈಲು ಮುಂದಕ್ಕೆ ಹೊರಟು ಹೋಗಿತ್ತು’ ಎಂದು ಪೊಲೀಸರು ಹೇಳಿದರು.

‘ರೈಲ್ವೆ ಸೇತುವೆಯಿಂದ ಕೆಳಗೆ ಬಿದ್ದು ಗಾಯಗೊಂಡ ಸತೀಶ್ ಅವರನ್ನು ಆಟೊ ಚಾಲಕರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಹೇಳಿದರು.

‘ರೈಲು ಹಳಿಯ ಪಕ್ಕದಲ್ಲೇ ಸಿಗ್ನಲ್ ಕಂಬಗಳಿವೆ. ಅದನ್ನು ಏರಿ ಆರೋಪಿಗಳು ಕೃತ್ಯ ಎಸಗಿದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT