ಶುಕ್ರವಾರ, ಡಿಸೆಂಬರ್ 3, 2021
20 °C
ರಾತ್ರಿಯಿಡೀ ವರುಣನ ಅಬ್ಬರ l ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು

ಗುಡುಗು– ಸಿಡಿಲು ಸಹಿತ ಜೋರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ರಾತ್ರಿ ಗುಡುಗು–ಸಿಡಿಲು ಸಹಿತ ಜೋರು ಮಳೆ ಸುರಿಯಿತು. ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ನಗರದಲ್ಲಿ ಕೆಲ ದಿನಗಳ ಕಾಲ ಜೋರಾಗಿ ಸುರಿದಿದ್ದ ಮಳೆ, ಎರಡು ದಿನ ಬಿಡುವು ನೀಡಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲು ಸಹ ಇತ್ತು. ಸಂಜೆ ನಂತರ, ಹಲವೆಡೆ ಮೋಡ ಮುಸುಕಿದ ವಾತಾವರಣ ಕಾಣಿಸಿಕೊಂಡಿತು.

ರಾತ್ರಿ 9.30 ಗಂಟೆ ಬಳಿಕ ಹಲವಡೆ ಜಿಟಿ ಜಿಟಿಯಾಗಿ ಮಳೆ ಶುರುವಾಯಿತು. ಗುಡುಗು– ಸಿಡಿಲಿನ ಅಬ್ಬರವೂ ಜೋರಾಗಿತ್ತು.

ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಬಸವೇಶ್ವರನಗರ,
ಮಹಾಲಕ್ಷ್ಮಿ ಬಡಾವಣೆ, ಯಶವಂತ ಪುರ, ಪೀಣ್ಯ, ಹಲಸೂರು, ಈಜಿಪುರ, ದೊಮ್ಮಲೂರು, ಬೆಳ್ಳಂದೂರು, ಕೋರ ಮಂಗಲ, ಮಡಿವಾಳ, ಬನಶಂಕರಿ, ಬಸವನಗುಡಿ, ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ ಹಾಗೂ ಸುತ್ತಮುತ್ತ ಮಳೆ ಅಬ್ಬರ ಹೆಚ್ಚಿತ್ತು.

ಅಶೋಕ ನಗರ, ಎಂ.ಜಿ.ರಸ್ತೆ, ಶಿವಾಜಿನಗರ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ
ಪ್ರದೇಶಗಳಲ್ಲೂ ಜೋರು ಮಳೆ ಆಯಿತು. ನಗರದ ಬಹುತೇಕ ಕಡೆ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಗುಂಡಿಗಳು ಬಿದ್ದು, ಅದರಲ್ಲೇ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ದಟ್ಟಣೆಯೂ ಕಂಡುಬಂತು. ಶಿವಾನಂದ ವೃತ್ತದ ಕೆಳ ಸೇತುವೆ, ಓಕಳಿಪುರ ಕೆಳ ಸೇತುವೆಗಳಲ್ಲಿ ಹೆಚ್ಚಿನ ನೀರು ಹರಿಯಿತು.

ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನ, ದ್ವಿಚಕ್ರ ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರು. ಬಸ್ ತಂಗುದಾಣ, ರಸ್ತೆಯ ಅಕ್ಕ–ಪಕ್ಕದ ಅಂಗಡಿಗಳ ಸೂರಿನಲ್ಲಿ ಜನಗಳು ನಿಂತಿದ್ದ ದೃಶ್ಯಗಳು ಕಂಡವು.

ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಅದರಲ್ಲೇ ಸಂಚರಿಸಲು ಹೋಗಿ ಕೆಲ ವಾಹನಗಳು ಉರುಳಿಬಿದ್ದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು.

‘ನಗರದ ಬಹುತೇಕ ಕಡೆ ಉತ್ತಮವಾಗಿ ಮಳೆ ಆಗುತ್ತಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಹಾಗೂ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾದ ಬಗ್ಗೆ ದೂರುಗಳು ಬಂದಿವೆ. ಅಲ್ಲೆಲ್ಲ ಸಿಬ್ಬಂದಿ ನೀರು ತೆರವು ಮಾಡುವ ಕೆಲಸ ಮಾಡುತ್ತಿದ್ದಾರೆ. ನಸುಕಿನವರೆಗೂ ಮತ್ತಷ್ಟು ದೂರುಗಳು ಬರಬಹುದು’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು