ಸೋಮವಾರ, ಸೆಪ್ಟೆಂಬರ್ 27, 2021
21 °C
ದಾಸರಹಳ್ಳಿ ಕ್ಷೇತ್ರದ ಬೆಲ್ಮಾರ್ ಲೇಔಟ್ ನಿವಾಸಿಗಳಿಗೆ ಮಳೆಗಾಲದಲ್ಲಿ ಅರೆನಿದ್ರೆ

ಮೋಡ ಆವರಿಸುತ್ತಲೇ ಈ ಪ್ರದೇಶದಲ್ಲಿ ಶುರುವಾಗುತ್ತದೆ ನಡುಕ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಕಾಶದಲ್ಲಿ ಮೋಡ ಕಟ್ಟಿದರೆ ದಾಸರಹಳ್ಳಿ ಭಾಗದ ಕೆಲ ಬಡಾವಣೆಗಳ ನಿವಾಸಿಗಳಲ್ಲಿ ನಡುಕ ಆರಂಭವಾಗುತ್ತದೆ. ಸಣ್ಣ ಮಳೆಗೂ ಉಕ್ಕುವ ರಾಜಕಾಲುವೆಗಳು ಈ ಜನರ ನಿದ್ರೆಗೆಡಿಸಿದೆ. ಎರಡು ರಾಜಕಾಲುವೆಗಳ ನಡುವೆ ಚಾಚಿಕೊಂಡಿರುವ ಬೆಲ್ಮಾರ್ ಬಡಾವಣೆ ನಿವಾಸಿಗಳಂತೂ ಮಳೆಗಾಲದಲ್ಲಿ ಅರೆನಿದ್ರೆಯಲ್ಲೇ ರಾತ್ರಿ ಕಳೆಯುತ್ತಾರೆ.

ರುಕ್ಮಿಣಿನಗರ, ಗುಂಡಪ್ಪ ಬಡಾವಣೆ, ಆರ್.ಆರ್. ಕಾಲೇಜು, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಬಡಾವಣೆ, ರಾಜಗೋಪಾಲನಗರ, ಚೊಕ್ಕಸಂದ್ರ ಸೇರಿದಂತೆ ಒಟ್ಟು 16ಕ್ಕೂ ಹೆಚ್ಚು ಪ್ರದೇಶಗಳು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿನ ನಿವಾಸಿಗಳು ಮಳೆ ಬಂದರೆ ಮುಳುಗುವ ಆತಂಕದಲ್ಲೇ ಕಾಲ ಕಳೆಯುತ್ತಾರೆ. ಅದರಲ್ಲೂ ಬೆಲ್ಮಾರ್ ಬಡಾವಣೆ ನಿವಾಸಿಗಳಂತೂ ಪ್ರವಾಹದಿಂದ ರೋಸಿ ಹೋಗಿದ್ದಾರೆ.

ಚೊಕ್ಕಸಂದ್ರ ಕೆರೆಯಿಂದ ದೊಡ್ಡ ಬಿದರಕಲ್ಲು ಕೆರೆಯ ಕಡೆಗೆ ಹರಿಯುವ ರಾಜಕಾಲುವೆ ಮತ್ತು ನೆಲಗದರನಹಳ್ಳಿ ಕಡೆಯಿಂದ ಬಂದು ಸೇರಿಕೊಳ್ಳುವ ಇನ್ನೊಂದು ರಾಜಕಾಲುವೆ ನಡುವೆ ಬೆಲ್ಮಾರ್ ಬಡಾವಣೆ ವ್ಯಾಪಿಸಿಕೊಂಡಿದೆ. ಚೊಕ್ಕಸಂದ್ರ ಕೆರೆಯಿಂದ ಬರುವ ರಾಜಕಾಲುವೆಯಿಂದ ನೀರು ಉಕ್ಕಿ ಜನ ತೊಂದರೆ ಅನುಭವಿಸುವುದು ನಾಲ್ಕೈದು ವರ್ಷಗಳಲ್ಲಿ ಆಗಾಗ ಮರುಕಳಿಸುತ್ತಿದೆ. ಇದರ ಜೊತೆಗೆ ಈಗ ನೆಲಗದರನಹಳ್ಳಿ ಕಡೆಯಿಂದ ಬರುವ ರಾಜಕಾಲುವೆಯೂ ಸಮಸ್ಯೆ ನೀಡಲು ಆರಂಭಿಸಿದೆ.

ನೆಲಗದರನಹಳ್ಳಿ ಕಡೆಯಿಂದ ಬರುವ ರಾಜಕಾಲುವೆ ಕಿರಿದಾಗಿದ್ದು, ಅದಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ನೆಲಗದರನಹಳ್ಳಿ ಸುತ್ತಮುತ್ತಲ ಪ್ರದೇಶಗಳ ನೀರು ಹರಿದು ಬರುವ ಕಾಲುವೆಯ ಸಂಪರ್ಕವನ್ನೂ ಇತ್ತೀಚೆಗೆ ಕಲ್ಪಿಸಲಾಗಿದೆ. ಬೆಲ್ಮಾರ್ ಲೇಔಟ್‌ನಲ್ಲಿ ಅಷ್ಟೇನೂ ಮಳೆಯಾಗದಿದ್ದರೂ, ಎತ್ತರದ ಪ್ರದೇಶದಲ್ಲಿರುವ ನೆಲಗದರನಹಳ್ಳಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮಳೆಯಾದರೂ ಈ ಲೇಔಟ್ ಮುಳುಗುತ್ತಿದೆ.

ಈ ರಾಜಕಾಲುವೆ ಹಿಗ್ಗಿಸುವ ಕಾಮಗಾರಿ ಆರಂಭವಾಗಿದೆ. ಮುನೇಶ್ವರ ದೇವಸ್ಥಾನದ ತನಕ ಎತ್ತರದ ತಡೆಗೋಡೆಗಳು ನಿರ್ಮಾಣ ವಾಗಿವೆ. ಅಲ್ಲಿಂದ ಮುಂದಕ್ಕೆ ರಸ್ತೆ ಬದಿಯ ಚರಂಡಿಯಷ್ಟು ಕಿರಿದಾದ ರಾಜಕಾಲುವೆ ಇದೆ. ಅಲ್ಲಿಯ ತನಕ ಸರಾಗವಾಗಿ ಬರುವ ನೀರು ಮುಂದಕ್ಕೆ ಹರಿದು ಹೋಗಲು ಸಾಧ್ಯವಾಗದೆ ಬಡಾವಣೆಗಳಿಗೆ ನುಗ್ಗುತ್ತಿದೆ. ಜುಲೈ 4ರಂದು ರಾತ್ರಿ ಮಳೆ ಸುರಿದು ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದಾಗ ಒಂದು ಬದಿಯಲ್ಲಿದ್ದ ಕಲ್ಲಿನ ಕಟ್ಟಡದ ತಡೆಗೋಡೆ ರಾಜಕಾಲುವೆ ಒಳಕ್ಕೆ ಕುಸಿದು ಬಿದ್ದಿದೆ. ನೀರು ಮುಂದೆ ಹರಿಯಲು ಸಾಧ್ಯವಾಗದೆ ಬಡಾವಣೆಯತ್ತ ನುಗ್ಗಿದೆ.

ಮಲಗಿದ್ದ ಮಕ್ಕಳ ಸಹಿತ ಎದ್ದು ಕುಳಿತ ನಿವಾಸಿಗಳು ಮನೆಯಿಂದ ನೀರು ಹೊರ ಹಾಕಲು ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ. ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳೆಲ್ಲವೂ  ಮುಳುಗಿ ಜನ ಪರದಾಡಿದರು. ಪದೇ ಪದೇ ಇದೇ ರೀತಿಯ ಸಮಸ್ಯೆ ಅನುಭವಿಸಿ ಜನ ಅಕ್ಷರಶಃ ರೋಸಿ ಹೋಗಿದ್ದಾರೆ. ರಾಜಕಾಲುವೆ ಹಿಗ್ಗಿಸುವ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ಸ್ಥಳೀಯರು.

‘ದಾಸರಹಳ್ಳಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ನಮ್ಮನ್ನು ಶಾಪಗ್ರಸ್ತರನ್ನಾಗಿ ಮಾಡಿದೆ. ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರ ಎನ್ನುವ ಕಾರಣಕ್ಕೆ ಯಾವುದೇ ಕೆಲಸಕ್ಕೂ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ. ನೀಡಿದ್ದ ಅನುದಾನವನ್ನೂ ವಾಪಸ್ ಪಡೆದಿದೆ. ರಾಜಕೀಯ ಕಾರಣಗಳಿಗಾಗಿ ಸಾಮಾನ್ಯ ಜನರನ್ನು ತೊಂದರೆಗೆ ಸಿಲುಕಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ’ ಎಂದು ಇಲ್ಲಿನ ನಿವಾಸಿ ರಮಾಕಾಂತ ದೂರಿದರು.

ಟೆಂಡರ್ ಮುಂದುವರಿಸಲು ಒತ್ತಾಯ

‘ದಾಸರಹಳ್ಳಿ ಕ್ಷೇತ್ರದಲ್ಲಿನ ರಾಜಕಾಲುವೆ ಸರಿಪಡಿಸಲು ₹130 ಕೋಟಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತು. ಅದನ್ನು ಸರ್ಕಾರ ತಡೆ ಹಿಡಿದಿದೆ’ ಎಂದು ಶಾಸಕ ಆರ್. ಮಂಜುನಾಥ್ ಆರೋಪಿಸಿದರು.

‘ರುಕ್ಮಿಣಿ ನಗರ, ಚೊಕ್ಕಸಂದ್ರ, ಗುಂಡಪ್ಪ ಬಡಾವಣೆ, ಶೆಟ್ಟಿಹಳ್ಳಿ, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಬಡಾವಣೆ, ರಾಜಗೋಪಾಲನಗರ, ಮಲ್ಲಸಂದ್ರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಅದನ್ನು ತಪ್ಪಿಸಲು ಟೆಂಡರ್ ಪ್ರಕ್ರಿಯೆ ಮುಂದುವರಿಸಬೇಕು’ ಎಂದು ಅವರು ಒತ್ತಾಯಿಸಿದರು.

16 ಕಡೆ ಅಪಾಯ ಜಾಸ್ತಿ

ದಾಸರಹಳ್ಳಿ ಕ್ಷೇತ್ರದಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗುವ ಅಪಾಯ ಒಟ್ಟು 16 ಜಾಗಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತುರ್ತಾಗಿ ಅಷ್ಟೂ ಕಡೆ ರಾಜಕಾಲುವೆ ದುರಸ್ತಿಪಡಿಸುವ ಕಾಮಗಾರಿಯನ್ನು ಆರಂಭಿಸ ಬೇಕಾಗಿದೆ. ಸರ್ಕಾರ ಅನುದಾನ ನಿಗದಿ ಮಾಡಿದರೆ ಕಾಮಗಾರಿ ಆರಂಭಿಸಿ ಮುಂದೆ ಆಗಲಿರುವ ಅಪಾಯ ತಪ್ಪಿಸಬಹುದು ಎಂದು ತಿಳಿಸಿದರು.

ಬೆಲ್ಮಾರ್ ಲೇಔಟ್‌ನಲ್ಲಿ ಕಳೆದ ವಾರ ಮನೆಗಳಿಗೆ ನೀರು ನುಗ್ಗಲು ಕಾರಣವಾದ ರಾಜಕಾಲುವೆ ಹಿಗ್ಗಿಸುವ ಕಾರ್ಯ ನಡೆಯುತ್ತಿದೆ. ಮಳೆ ಕಾರಣದಿಂದ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ ಎಂದು ಹೇಳಿದರು.

ಎರಡೂ ಕಡೆಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗು ವಂತೆ ಮಾಡಿದರೆ ಸಮಸ್ಯೆ ತಪ್ಪಲಿದೆ. ಈ ಕೆಲಸವನ್ನು ಬಿಬಿಎಂಪಿ ಮಾಡಬೇಕು
- ರಂಗಸ್ವಾಮಿ, ಬೆಲ್ಮಾರ್ ಲೇಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ನಾಲ್ಕು ವರ್ಷಗಳಿಂದ ಸಮಸ್ಯೆ ತೀವ್ರಗೊಂಡಿದೆ. ಸರಿಪಡಿಸಲು ಸಿ.ಎಂಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು,
- ರಜನಿ ಶ್ರೀನಿವಾಸ್, ಬೆಲ್ಮಾರ್ ಲೇಔಟ್ ನಿವಾಸಿ

ಮಳೆಗಾಲದಲ್ಲಿ ರಾತ್ರಿ ವೇಳೆ ನಿದ್ರೆಯೇ ಬಾರದಂತೆ ಆಗಿದೆ. ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡರೂ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
- ಕಲಾವತಿ, ಬೆಲ್ಮಾರ್ ಲೇಔಟ್ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.