ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ ‘ನಿದ್ದೆ’– ಮಳೆಗೇ ಕಾಮಗಾರಿ!

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೋರಿ ನಿರ್ಮಾಣ ಕಾಮಗಾರಿ ಆರಂಭ
Last Updated 8 ಜೂನ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜೋರು ಮಳೆ ಬಂದು ರಾಜಕಾಲುವೆಗಳೆಲ್ಲ ಉಕ್ಕಿ ಹರಿಯಲು ಆರಂಭಿಸಿದ ಬಳಿಕವಷ್ಟೇ ಪಾಲಿಕೆಯು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಪ್ರವಾಹ ತಡೆಯುವ ಕಾಮಗಾರಿಯನ್ನು ಆರಂಭಿಸಿದೆ. ಬಿಬಿಎಂಪಿಯ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಇರುವ ರಾಜಕಾಲುವೆಗೆಮೆಟ್ರೊ ನಿಲ್ದಾಣದ ಕಡೆಯಿಂದ ಹರಿಯುವ ಚರಂಡಿ ನೀರು ಸೇರಲು ಕಿರಿದಾದ ಚರಂಡಿ ಇದೆ. ಸ್ವಲ್ಪ ಮಳೆ ಬಂದರೂ ಕೊಳಚೆ ನೀರು ರಸ್ತೆಗೆ ಹರಿದು ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ಇದು ತಪ್ಪಬೇಕೆಂದರೆ ರಸ್ತೆಯ ಇನ್ನೊಂದು ಬದಿಯಲ್ಲಿರುವ ರಾಜಕಾಲುವೆಗೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಬೇಕು. ರಸ್ತೆಯ ಅಡಿಯಲ್ಲಿ ಮೋರಿಯೊಂದನ್ನು ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯ.

ದೀಪಾಂಜಲಿನಗರ, ಸ್ಯಾಟಲೈಟ್‌ ಬಸ್‌ ನಿಲ್ದಾಣದ ಕಡೆಯಿಂದ ಮೇಲ್ಸೇತುವೆ ಕೆಳಗೆ ಹೋಗುವ ವಾಹನಗಳು ಮತ್ತು ನಾಗರಬಾವಿ ಕಡೆಯಿಂದ ರಿಂಗ್ ರಸ್ತೆಯಲ್ಲಿ ಬರುವ ವಾಹನಗಳು ಮೈಸೂರು ಕಡೆಗೆ ಹೋಗಲು ಬಲ ತಿರುವು ಪಡೆದುಕೊಳ್ಳುವ ಪ್ರಮುಖ ಜಂಕ್ಷನ್‌ನಲ್ಲಿ ಮೋರಿ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿಆರಂಭಿಸಿದೆ.

ಅದಕ್ಕಾಗಿ ರಸ್ತೆಯ ಒಂದು ಭಾಗವನ್ನು ಅಗೆದು, ವಾಹನಗಳ ಸಂಚಾರಕ್ಕೆ ಸಣ್ಣದಾಗಿ ಜಾಗ ಬಿಡಲಾಗಿದೆ. ಒಂದು ಭಾಗದಲ್ಲಿ ಪೈಪ್‌ಗಳನ್ನು ಅಳವಡಿಸಿದ ಬಳಿಕ ಅಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಇನ್ನೊಂದು ಬದಿಯಲ್ಲಿ ಕಾಮಗಾರಿ ನಡೆಸುವುದು ಬಿಬಿಎಂಪಿಯ ಉದ್ದೇಶ.

ಮುಂಗಾರುಪೂರ್ವ ಮಳೆ ಆರಂಭವಾಗಿರುವ ಕಾರಣಪೈಪ್ ಅಳವಡಿಸಲು ತೆಗೆದಿರುವ ಗುಂಡಿಯಲ್ಲಿ ದಿನವೂ ನೀರು ನಿಲ್ಲುತ್ತಿದೆ. ನಿಂತಿರುವ ನೀರನ್ನು ಮೋಟರ್‌ ಬಳಸಿ ಮೇಲೆತ್ತಿ ಮನೆಗೆ ಹೋದರೆ, ರಾತ್ರಿ ಮಳೆಯಾಗಿ ಮತ್ತೆ ನೀರು ತುಂಬಿಕೊಳ್ಳುತ್ತಿದೆ. ಪ್ರತಿನಿತ್ಯ ನೀರೆತ್ತುವುದನ್ನು ಬಿಟ್ಟರೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

‘ಪ್ರತಿನಿತ್ಯ ಕೆಲಸ ಮಾಡಿದರೂ ಕಾಮಗಾರಿ ಮುಗಿಸಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಮಳೆ ಬರುವ ಮುನ್ನ ಆರಂಭಿಸಬೇಕಾದ ಕಾಮಗಾರಿಯನ್ನು ಮಳೆಯ ನಡುವೆ ಬಿಬಿಎಂಪಿ ಆರಂಭಿಸಿದೆ. ಇದು ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ’ ಎನ್ನುತ್ತಾರೆ ರಾಜರಾಜೇಶ್ವರಿನಗರದ ಜಗದೀಶ್.

‘ಮೊದಲೇ ಕಿರಿದಾದ ರಸ್ತೆಯನ್ನು ಇನ್ನಷ್ಟು ಕಿರಿದು ಮಾಡಲಾಗಿದೆ. ಕಾಮಗಾರಿಯೂ ಮುಂದುವರಿಯುತ್ತಿಲ್ಲ. ವಾಹನಗಳು ಸಾಲುಗಟ್ಟಿ ನಿಲ್ಲುವುದೂ ತಪ್ಪುತ್ತಿಲ್ಲ. ಪ್ರವಾಹದ ಬಗ್ಗೆ ಅರಿವಿದ್ದರೂ ವರ್ಷವಿಡೀ ನಿದ್ದೆ ಮಾಡಿ ಈಗ ಕಾಮಗಾರಿ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳಿಗೆ ಬುದ್ಧಿ ಇದೆಯೇ’ ಎಂದು ಅವರು ಪ್ರಶ್ನಿಸಿದರು.

ಜುಲೈ 15ರೊಳಗೆ ಕೆಲಸ ಪೂರ್ಣ

ಬಿಬಿಎಂಪಿಯರಸ್ತೆ ಮತ್ತು ಮೂಲಸೌಕರ್ಯಗಳ ವಿಭಾಗದಿಂದ ನಡೆಸಲು ಉದ್ದೇಶಿಸಿದ್ದ ಕಾಮಗಾರಿಯನ್ನು ರಾಜಕಾಲುವೆ ವಿಭಾಗಕ್ಕೆ ವರ್ಗಾಯಿಸಿರುವ ಕಾರಣ ವಿಳಂಬವಾಗಿ ಕೆಲಸ ಆರಂಭವಾಗಿದೆ ಎಂದುಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

‘ಮೋರಿಯನ್ನು ಬೇರೆಡೆ ಸಿದ್ಧಪಡಿಸಿಕೊಂಡು ತಂದು ಜಂಕ್ಷನ್‌ನಲ್ಲಿ ಜೋಡಣೆ ಮಾಡಲಾಗುವುದು. ಹೀಗಾಗಿ ಮಳೆ ಇದ್ದರೂ ಕಾಮಗಾರಿಗೆ ಅಡಚಣೆ ಆಗುವುದಿಲ್ಲ. ಜುಲೈ 15ರೊಳಗೆ ಕೆಲಸ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘₹1.9 ಕೋಟಿ ಮೊತ್ತದ ಈ ಕಾಮಗಾರಿ ಪೂರ್ಣಗೊಂಡರೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿನ ಪ್ರವಾಹಕ್ಕೆ ಶಾಶ್ವತ ಪರಿಹಾರ ದೊರಕಲಿದೆ’ ಎಂದರು.

**

ಬೇಸಿಗೆಯಲ್ಲಿ ಸುಮ್ಮನೆ ಕುಳಿತಿದ್ದ ಪಾಲಿಕೆ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಜನರಿಗೆ ಸಮಸ್ಯೆ ತಂದೊಡ್ಡುವುದೇ ಪಾಲಿಕೆ ಕೆಲಸವಾಗಿದೆ
– ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT