ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ ಹೆಸರು ಬದಲು ಯತ್ನ: ಡಿಕೆಶಿ ಪಣ

ರಾಮನಗರ ಹೆಸರು ಬದಲು ಯತ್ನ l ಬಿಜೆಪಿ–ಜೆಡಿಎಸ್ ವಿರೋಧ
Published 10 ಜುಲೈ 2024, 3:38 IST
Last Updated 10 ಜುಲೈ 2024, 3:38 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಜೆಪಿ, ಜೆಡಿಎಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ತಮ್ಮ ಜಿಲ್ಲೆಯ ಶಾಸಕರು, ಜನಪ್ರತಿ ನಿಧಿಗಳಿದ್ದ ನಿಯೋಗದ ನೇತೃತ್ವ ವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸುವ ಮೂಲಕ ‘ರಾಮನಗರದ ರಾಜಕೀಯ’ದ ಮತ್ತೊಂದು ಅಧ್ಯಾಯವನ್ನು ತೆರೆದರು.

ಕಾಂಗ್ರೆಸ್ ನಾಯಕರು ಮಂಡಿಸಿದ ಈ ಪ್ರಸ್ತಾವವನ್ನು ವಿರೋಧಿಸಿರುವ ಬಿಜೆಪಿ–ಜೆಡಿಎಸ್‌ ನಾಯಕರು ರಾಮನಗರ ಹೆಸರು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮರುನಾಮಕರಣದ ಪ್ರಸ್ತಾವವನ್ನು ಸಲ್ಲಿಸಿದ್ದೇವೆ’ ಎಂದು ಹೇಳಿದರು.

‘ಬೆಂಗಳೂರು ನಗರ ಸೇರಿ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿಯ ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಎಂದು ಹಿಂದೆ ವಿಭಜಿಸ ಲಾಗಿತ್ತು. ಈಗ ಹಿಂದಿನ ಹೆಸರನ್ನು ಉಳಿಸಿಕೊಳ್ಳಬೇಕು. ರಾಮನಗರವನ್ನು ಕೇಂದ್ರಾಡಳಿತವಾಗಿ ಇಟ್ಟುಕೊಂಡೇ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಮತ್ತೆ ಅಧಿಕಾರಕ್ಕೆ ಬಂದು ಕಿತ್ತೆಸೆಯುತ್ತೇನೆ’

ನವದೆಹಲಿ: ಕಾಂಗ್ರೆಸ್‌ನವರು ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು, ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ, ಇವರು ಇಟ್ಟಿರುವ ಹೆಸರನ್ನು ಕಿತ್ತೆಸೆಯುತ್ತೇನೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಇಲ್ಲಿ ಮಾತನಾಡಿದ ಅವರು,  ‘ರಾಮನಗರ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ, ಪೌರಾಣಿಕ ಐತಿಹ್ಯವಿದೆ. ಜಿಲ್ಲೆಯ ಹೆಸರಿನಲ್ಲಿ ರಾಮನ ಹೆಸರಿದೆ. ಅದನ್ನು ಬದಲಿಸುವ ಮೂಲಕ ರಾಮದೇವರಿಗೆ ಅಪಚಾರ ಮಾಡಲು ಹೊರಟಿದ್ದಾರೆ. ರಾಮನಗರವು ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ಹಣವನ್ನು ತುಂಬಿಸಿಕೊಳ್ಳಬಹುದು ಎಂಬುದು ಅವರ ಉದ್ದೇಶ’ ಎಂದು ಶಿವಕುಮಾರ್ ಹೆಸರು ಉಲ್ಲೇಖಿಸದೇ ದೂರಿದರು.

ಜಿಲ್ಲೆಗೆ ಹೆಸರು ಬದಲಾಯಿಸುವುದು ಅನಗತ್ಯ. ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಅವರಿಗೆ ಬಂದಿರುತ್ತಿತ್ತು ಎಂದರು.

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮ ಕರಣ ಮಾಡುವಂತೆ ಶಿವಕುಮಾರ್ ನೇತೃತ್ವದ ನಿಯೋಗ ಮನವಿ ನೀಡಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಗುವುದು
ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯದ ಗಡಿ ಬರುತ್ತದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಹಾಗೂ ರಾಮನಗರ ಭಾಗ ಮಾತ್ರ. ಬೆಂಗಳೂರು ಎಂಬ ಹೆಸರು ಜಾಗತಿಕ ಮನ್ನಣೆ ಹೊಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡುವುದರಿಂದ ಮುಂದೆ ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರಿನವರೆಗೂ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಹೊಸ ಕೈಗಾರಿಕೆಗಳ ಸ್ಥಾಪನೆ, ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ’ ಎಂದು ಅವರು ವಿವರಿಸಿದರು.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಇಕ್ಬಾಲ್ ಹುಸೇನ್, ಎಚ್.ಸಿ. ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ಸುಧಾಮದಾಸ್‌, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ರಾಜು, ಅಶ್ವಥ್ ಹಾಗೂ ರಘುನಂದನ್‌ ರಾಮಣ್ಣ ನಿಯೋಗದಲ್ಲಿದ್ದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಸರ್ಕಾರದ ಸಂಚಿನ ಹಿಂದೆ ರಾಮ ದ್ವೇಷ, ರಿಯಲ್‌ ಎಸ್ಟೇಟ್‌ ವ್ಯವಹಾರ ಅಡಗಿದೆ..
ಆರ್‌. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT