ಐಎಸ್ ‘ಬಳ್ಳಾರಿ ಘಟಕ’ದ ಕೃತ್ಯ
‘ಬಾಂಬ್ ಸ್ಫೋಟದ ಬಗ್ಗೆ ಕೆಲ ಸುಳಿವು ಲಭ್ಯವಾಗಿದ್ದರಿಂದ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಮಿನಾಜ್‌ನ ಸಹಚರರಾದ ಬಳ್ಳಾರಿಯ ಸೈಯದ್ ಸಮೀರ್ (19) ಮುಂಬೈನ ಅನಾಸ್ ಇಕ್ಬಾಲ್ ಶೇಖ್ (23) ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್‌ನನ್ನು (26) ನ್ಯಾಯಾಲಯದ ಆದೇಶದಂತೆ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಇವರೆಲ್ಲರೂ ಸೇರಿ ಕಟ್ಟಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್) ಬಳ್ಳಾರಿ ಘಟಕದಿಂದಲೇ ಬಾಂಬ್ ಸ್ಫೋಟ ಕೃತ್ಯ ಎಸಗಿರುವ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸುತ್ತಿವೆ’ ಎಂದು ತನಿಖಾ ಸಂಸ್ಥೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ವಶಕ್ಕೆ ಪಡೆದಿರುವ ಶಂಕಿತರನ್ನು ಬಳ್ಳಾರಿಗೆ ಕರೆದೊಯ್ದಿರುವ ಎನ್‌ಐಎ ವಿಶೇಷ ತಂಡ ಬಾಂಬ್ ಇಟ್ಟವನ ಪತ್ತೆಗಾಗಿ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಮಿನಾಜ್ ಹಾಗೂ ಸೈಯದ್ ಸಮೀರ್ ಓಡಾಡಿದ್ದ ಬಳ್ಳಾರಿಯ ಎಲ್ಲ ಸ್ಥಳಗಳು ಹಾಗೂ ಮಳಿಗೆಗಳಲ್ಲಿ ಮಾಹಿತಿ ಕಲೆಹಾಕುತ್ತಿದೆ. ಜೊತೆಗೆ ಬಸ್ ನಿಲ್ದಾಣ ಹಾಗೂ ಇತರೆಡೆ ಇರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದೆ’ ಎಂದು ಮೂಲಗಳು ಹೇಳಿವೆ.