ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rameshwaram Cafe Blast | ‘ಬಸ್ಸಿನಲ್ಲಿ ಬಂದ, ಇಡ್ಲಿ ತಿಂದು ಬಾಂಬ್ ಇಟ್ಟು ಹೋದ’

* ಶಂಕಿತ ಹೊರಟು ಹೋದ ಗಂಟೆ ಬಳಿಕ ಸ್ಫೋಟ * ದುಷ್ಕರ್ಮಿ ಪತ್ತೆಗೆ 8 ವಿಶೇಷ ತಂಡ ರಚನೆ
Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಇರಿಸಿ ಪರಾರಿಯಾಗಿರುವ ಶಂಕಿತನ ಪತ್ತೆಗಾಗಿ ಪೊಲೀಸರ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ನಗರ ಹಾಗೂ ಹೊರ ರಾಜ್ಯಗಳಲ್ಲಿ ಹುಡುಕಾಟ ಆರಂಭವಾಗಿದೆ.

ಕೆಫೆಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು. ಸಿಬ್ಬಂದಿ, ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಗ್ರಾಹಕರ ತಟ್ಟೆಗಳನ್ನು ತೊಳೆಯಲು ಮೀಸಲಿಟ್ಟ ಜಾಗದ ಪಕ್ಕದಲ್ಲಿದ್ದ ಕಟ್ಟೆ ಮೇಲೆ ಬಾಂಬ್ ಸ್ಫೋಟಗೊಂಡಿತ್ತು. ಎಲ್ಲರೂ ದಿಕ್ಕಾಪಾಲಾಗಿ ಹೋಟೆಲ್‌ನಿಂದ ಹೊರಗೆ ಓಡಿ ಬಂದರು. ಘಟನಾ ಸ್ಥಳದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರು.

‘ಕುಟುಂಬಸ್ಥರ ಜೊತೆ ಊಟ ಮಾಡಲು ಕೆಫೆಗೆ ಬಂದಿದ್ದೆ. ಎಲ್ಲರೂ ಊಟ ತೆಗೆದುಕೊಂಡು ಕಟ್ಟೆ ಮೇಲೆ ಕುಳಿತು ತಿನ್ನುತ್ತಿದ್ದೆವು. ಸ್ವಲ್ಪ ದೂರದಲ್ಲಿದ್ದ ಕಟ್ಟೆ ಮೇಲೆ ಸ್ಫೋಟ ಉಂಟಾಗಿ, ದಟ್ಟ ಹೊಗೆ ಬಂತು. ಹೊಗೆ ಹೋದ ನಂತರ ಗಾಯಾಳುಗಳು ಬಿದ್ದಿದ್ದು ಕಂಡಿತು’ ಎಂದು ಪ್ರತ್ಯಕ್ಷದರ್ಶಿ ನಿಖಿಲ್ ಹೇಳಿದರು.

‘ತೀವ್ರ ಗಾಯಗೊಂಡಿದ್ದ ಮಹಿಳೆಯ ಮುಖ, ಕಾಲು, ಕೈ ಹಾಗೂ ಇತರೆ ಭಾಗಕ್ಕೆ ಗಾಯವಾಗಿತ್ತು. ಉಳಿದವರ ಬಟ್ಟೆಗಳು ಹರಿದಿದ್ದವು. ಮೈಗೂ ಗಾಯವಾಗಿತ್ತು. ಎಲ್ಲರನ್ನೂ ಆಟೊದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು’ ಎಂದರು.

ಶಂಕಿತನ ಸುಳಿವು ಪತ್ತೆ:
‘ಹೋಟೆಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಶಂಕಿತನ ಹಾವ–ಭಾವ ಸೆರೆಯಾಗಿದೆ. ಹೋಟೆಲ್ ಅಕ್ಕ–ಪಕ್ಕದಲ್ಲಿರುವ ಕ್ಯಾಮೆರಾದಲ್ಲಿ ಮುಖ ಚಹರೆಯ ಸುಳಿವು ಲಭ್ಯವಾಗಿದೆ. ವಿಡಿಯೊ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್ಸಿನಲ್ಲಿ ಬಂದಿದ್ದ ಆರೋಪಿ
‘ಬ್ರೂಕ್‌ಫೀಲ್ಡ್‌ಗೆ ಬಸ್ಸಿನಲ್ಲಿ ಬಂದಿದ್ದ ಆರೋಪಿ, ಬ್ಯಾಗ್ ಹಿಡಿದುಕೊಂಡು ನೇರವಾಗಿ ರಾಮೇಶ್ವರಂ ಕೆಫೆಗೆ ಹೋಗಿದ್ದ. ಇಡ್ಲಿ ಪಡೆದಿದ್ದ. ಕೈ ಹಾಗೂ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ಜಾಗವಿದೆ. ಇದರ ಪಕ್ಕವೇ ಕಟ್ಟೆ ಇದ್ದು, ಅದೇ ಜಾಗದಲ್ಲಿ ಶಂಕಿತ ಕುಳಿತುಕೊಂಡಿದ್ದ. ಕಟ್ಟೆಗೆ ಪಕ್ಕ ಮರವಿದ್ದು, ಅಲ್ಲೇ ಬ್ಯಾಗ್ ಇರಿಸಿದ್ದ. ನಂತರ, ಇಡ್ಲಿ ತಿಂದು ಸ್ಥಳದಿಂದ ಹೊರಟು ಹೋಗಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿದೆ’ ಎಂದು ಹೇಳಿದರು.

‘ಆರೋಪಿ ಹೋದ ಗಂಟೆ ನಂತರ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟಗೊಂಡಿದೆ. ಶಂಕಿತ, ಮೊದಲೇ ಟೈಮರ್ ನಿಗದಿ ಮಾಡಿ ಕೆಫೆಗೆ ಬಂದು ಬಾಂಬ್ ಇರಿಸಿ ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT