ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕೃತವಾಗಿ ವಹಿಸಿಕೊಂಡಿದ್ದು, ಎನ್‌ಐಎ ಐಜಿಪಿ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ಶುರುಮಾಡಿವೆ.
ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ಸ್ಥಳಕ್ಕೆ ಎನ್‌ಐಎ ಸೇರಿ ಕೇಂದ್ರದ ಹಲವು ತನಿಖಾ ಸಂಸ್ಥೆಗಳು ಭೇಟಿ ನೀಡಿದ್ದವು. ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದ್ದವು. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಕಾನೂನು ಪ್ರಕಾರ ಯುಎಪಿಎ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಅಧಿಕೃತವಾಗಿ ತನಿಖೆ ಆರಂಭಿಸಲು ಎನ್‌ಐಎ ಅಧಿಕಾರಿಗಳಿಗೆ ನಿರ್ದೇಶನ ದೊರಕಿದೆ. ಹೀಗಾಗಿ, ಐಜಿಪಿ ಸಂತೋಷ್ ರಸ್ತೋಗಿ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ರಾಜ್ಯದ ಡಿಜಿ– ಐಜಿಪಿ ಭೇಟಿ: ಪ್ರಕರಣದ ತನಿಖೆ ಆರಂಭಿಸಿರುವ ಎನ್‌ಐಎ ಐಜಿಪಿ ಸಂತೋಷ್ ರಸ್ತೋಗಿ ಹಾಗೂ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರನ್ನು ಸೋಮವಾರ ಭೇಟಿಯಾಗಿ ಮಾಹಿತಿ ಪಡೆದರು.
ಸ್ಫೋಟ ಪ್ರಕರಣದ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದು, ಅದರ ಪ್ರಗತಿ ಬಗ್ಗೆ ಐಜಿಪಿ ಮಾಹಿತಿ ಪಡೆದುಕೊಂಡರು. ಜೊತೆಗೆ, ಪ್ರಕರಣದ ಕಡತಗಳನ್ನು ಸೂಕ್ತ ಸಮಯಕ್ಕೆ ಹಸ್ತಾಂತರಿಸುವಂತೆ ಕೋರಿದರೆಂದು ಗೊತ್ತಾಗಿದೆ.
ಎನ್‌ಐಎ ಐಜಿಪಿ ಭೇಟಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಲೋಕ್ ಮೋಹನ್, ‘ಬಾಂಬ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವಹಿಸುವ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ, ಎನ್‌ಐಎ ಐಜಿಪಿ ಕಚೇರಿಗೆ ಬಂದು ಮಾತುಕತೆ ನಡೆಸಿದರು’ ಎಂದರು.
‘ಇದೊಂದು ಸೂಕ್ಷ್ಮ ಪ್ರಕರಣ. ತನಿಖೆ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಸಿಸಿಬಿ, ರಾ, ಐಬಿ ಸಹಕಾರ: ಬಾಂಬ್ ಸ್ಫೋಟ ನಡೆದಿದ್ದ ದಿನದಿಂದಲೂ ಎಲ್ಲ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ಕೈಗೊಂಡಿವೆ. ಬೆಂಗಳೂರು ಸಿಸಿಬಿ ಪೊಲೀಸರು ಅಧಿಕೃತವಾಗಿ ತನಿಖೆ ನಡೆಸುತ್ತಿದ್ದರು. ಯುಎಪಿಎ ಕಾಯ್ದೆ ಪ್ರಕರಣವಾಗಿದ್ದರಿಂದ ಎನ್‌ಐಎ, ರಾ, ಕೇಂದ್ರ ಗುಪ್ತಚರ (ಐಬಿ) ಹಾಗೂ ಎನ್‌ಎಸ್‌ಜಿ ಕಮಾಂಡೊಗಳು ಮಾಹಿತಿ ಕಲೆಹಾಕುತ್ತಿದ್ದರು.
‘ಪ್ರಕರಣದ ತನಿಖೆಯನ್ನು ಎನ್‌ಐಎ ಅಧಿಕೃತವಾಗಿ ವಹಿಸಿಕೊಂಡಿದೆ. ಸಿಸಿಬಿ, ರಾ, ಎನ್‌ಎಸ್‌ಜಿ ಕಮಾಂಡೊಗಳು ಹಾಗೂ ಹೊರ ರಾಜ್ಯಗಳ ಪೊಲೀಸರು ತನಿಖೆಗೆ ಸಹಕಾರ ನೀಡಲಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು, ಸ್ಫೋಟದ ಆರೋಪಿಯನ್ನು ಪತ್ತೆ ಮಾಡಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಬಾಂಬ್ ಸ್ಫೋಟ ಪ್ರಕರಣ ಭೇದಿಸಿ ಆರೋಪಿ ಯನ್ನು ಬಂಧಿಸಲು ಬೆಂಗಳೂರು ಪೊಲೀಸರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಈಗಾಗಲೇ ಲಭ್ಯವಾಗಿವೆ’ ಎಂದು ಡಿಜಿ–ಐಜಿಪಿ ಅಲೋಕ್ ಮೋಹನ್ ಹೇಳಿದರು.
ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆ ಮಾಡಲು ಕಾರ್ಯಾಚರಣೆ ನಡೆಸುತ್ತಿರುವ ತನಿಖಾ ತಂಡಗಳು, ಹೊರ ಜಿಲ್ಲೆ ರಾಜ್ಯಗಳಲ್ಲಿ ಶೋಧ ಆರಂಭಿಸಿವೆ.
‘ಸ್ಫೋಟದ ನಂತರ ಪರಾರಿಯಾಗಿರುವ ಆರೋಪಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಹೋಗಿರುವ ಮಾಹಿತಿ ಇದೆ. ಅಲ್ಲೆಲ್ಲ ಶೋಧ ನಡೆಯುತ್ತಿದೆ. ಆರೋಪಿ ಎಲ್ಲಿದ್ದಾನೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.