ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ತರಹೇವಾರಿ ಖಾದ್ಯಗಳ ಘಮಲು

ರಂಜಾನ್: ಕಿಕ್ಕಿರಿದು ಸೇರಿದ ಜನತೆ, ಮಾಂಸಹಾರಿ ಭಕ್ಷ್ಯಗಳಿಗೆ ಭಾರೀ ಬೇಡಿಕೆ
Last Updated 8 ಏಪ್ರಿಲ್ 2023, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಂಜಾನ್‌ ಮಾಸದ ಇಳಿ ಸಂಜೆಯ ಹೊತ್ತಲ್ಲಿ ಶಿವಾಜಿನಗರದ ಚಾಂದನಿಚೌಕ್‌, ಫ್ರೇಜರ್‌ ಟೌನ್‌ ಫುಡ್‌ ಸ್ಟ್ರೀಟ್‌ ಕಡೆ ಒಮ್ಮೆ ಸುತ್ತಿದರೆ ಸಾಕು. ತರಹೇವಾರಿ ಖಾದ್ಯಗಳ ಘಮಲು ಮೂಗಿಗೆ ಬಡಿಯುತ್ತದೆ.

ಫ್ರೇಜರ್‌ಟೌನ್‌ನ ಮಸೀದಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಸಂಜೆಯಾಗುತ್ತಲೇ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಶೀರ್‌ ಕುರ್ಮಾ, ದೂದ್‌ ಕಾ ಸೇಮಿಯಾ, ಬಾದಾಮ್‌ ಸ್ಪೆಷಲ್‌ ಫಲೂದ ಸೇರಿ ಬಗೆ ಬಗೆಯ ಸಿಹಿ ತಿನಿಸುಗಳೂ ಇಲ್ಲಿ ಲಭ್ಯ. ಮತ್ತೊಂದು ಕಡೆ ಮಾಂಸಾಹಾರಿಗಳಿಗಂತೂ ಇದು ಹೇಳಿ ಮಾಡಿಸಿದ ತಾಣ. ಸಮೋಸಾ, ಚಿಕನ್‌ ಕಬಾಬ್, ಶೀಖ್‌ ಕಬಾಬ್, ಮಟನ್‌ ಕಬಾಬ್, ಹಲೀಂ ಸೇರಿ ಮೀನಿನ ವೈವಿಧ್ಯಮಯ ಖಾದ್ಯಗಳು ಬಾಯಲ್ಲಿ
ನೀರೂರಿಸುತ್ತಿವೆ.

ಕತ್ತಲಾಗುತ್ತಿದ್ದಂತೆಯೇ ಹೊತ್ತಿಕೊಳ್ಳುವ ಬಣ್ಣ–ಬಣ್ಣದ ದೀಪಗಳು ಈ ರಸ್ತೆಗಳ ಮತ್ತಷ್ಟು ಮೆರುಗು
ಹೆಚ್ಚಿಸುತ್ತವೆ. ಸಂಜೆ ಕಳೆಗಟ್ಟುವ ಮಾರುಕಟ್ಟೆ ಬೆಳಗಿನ ಜಾವ ನಾಲ್ಕರವರೆಗೂ ನಡೆಯುತ್ತದೆ. ಇಡೀ ರಾತ್ರಿ ಇಲ್ಲಿ ವ್ಯಾಪಾರ–ವಹಿವಾಟು ನಡೆಯುತ್ತದೆ. ಹೊಸದೊಂದು ಲೋಕವೇ ಅನಾವರಣಗೊಳ್ಳುತ್ತದೆ.

‘ಇಲ್ಲಿನ ಆಹಾರ ಮಳಿಗೆಗಳಲ್ಲಿ ಪ್ರತಿನಿತ್ಯ ಮಧ್ಯಾಹ್ನ 3 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೂ ವ್ಯಾಪಾರ ನಡೆಯುತ್ತದೆ. ರಂಜಾನ್‌ ಮಾಸದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರವೂ ಹೆಚ್ಚು. ಸಂಜೆ 6.45ಕ್ಕೆ ನಮಾಜ್‌ ಮುಗಿಸಿ ಮನೆಗೆ ಮರಳುವ ಅನೇಕರು ಈ ತಿನಿಸುಗಳನ್ನು ಖರೀದಿಸುತ್ತಾರೆ. ಇಲ್ಲಿ ಪಾರ್ಸಲ್‌ ತೆಗೆದುಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚು. ಈ ತಿಂಗಳೊಂದರಲ್ಲೇ ₹2.50 ಲಕ್ಷದಿಂದ ₹3ಲಕ್ಷದವರೆಗೂ ವಹಿವಾಟು ನಡೆಯುತ್ತದೆ’ ಎಂದು ಇಲ್ಲಿನ ಹೋಟೆಲ್‌ ವೊಂದರ ಮಾಲೀಕ ಮಹಮ್ಮದ್ ಯೂಸುಫ್ ಮಾಹಿತಿ ನೀಡಿದರು.

‘ಒಂದು ಪ್ಲೇಟ್‌ ಒಂಟೆ ಮಾಂಸಕ್ಕೆ ₹280, ಚಿಕನ್‌ ಮಲಾಯಿ ತಂಗಡಿಗೆ ₹180, ಇದರೊಂದಿಗೆ ಹಲವಾರು ಬಗೆಯ ಮೀನು, ಏಡಿಯ ಖಾದ್ಯಗಳು ನಮ್ಮಲ್ಲಿ ಲಭ್ಯ’ ಎಂದು ಜೆ.ಎಂ.ಜೆ ಹೋಟೆಲ್‌ನ ಜವಾದ್‌ ಪಾಷಾ ತಿಳಿಸಿದರು.

----

ಹೈದರಾಬಾದಿ ಹಲೀಂಗೆ ಬೇಡಿಕೆ

ರಂಜಾನ್‌ ಮಾಸದಲ್ಲಿ ಹೈದರಾಬಾದಿ ಹಲೀಂಗೆ ಎಲ್ಲಿಲ್ಲದ ಬೇಡಿಕೆ. ಈ ಪದಾರ್ಥ ಸೇವನೆ ಇಲ್ಲದೆ ಸೇವನೆ ಹಬ್ಬದ ಆಚರಣೆ ಅಪೂರ್ಣವಾದಂತೆ ಭಾಸವಾಗುತ್ತದೆ. ನಗರದ ಫ್ರೇಜರ್‌ಟೌನ್‌ನ ಮಸೀದಿ ರಸ್ತೆಯಲ್ಲಿ ವಿವಿಧ ಬಗೆಯ ಹಲೀಂ ತಯಾರಿಸುವ ಹೋಟೆಲ್‌ಗಳಿದ್ದು, ಸಂಜೆ ವೇಳೆ ಜನಜಂಗುಳಿ ನೆರೆದಿರುತ್ತದೆ.

‘ಸ್ವಾದಿಷ್ಟ, ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಖಾದ್ಯವಾದ ಹಲೀಂ ಸೇವನೆಗೆ ಮುಸ್ಲಿಮರು, ಹಿಂದೂಗಳು ಸೇರಿದಂತೆ ಇತರೆ ಧರ್ಮೀಯರು ಆಕರ್ಷಿತರಾಗಿದ್ದಾರೆ. ನಗರದಲ್ಲಿ ಮಟನ್‌, ಚಿಕನ್‌ ಹಾಗೂ ಬೀಫ್‌ ಹಲೀಂ ಲಭ್ಯವಿದ್ದು, ಹೆಚ್ಚಿನ ಜನರು ಚಿಕನ್‌ ಮತ್ತು ಮಟನ್‌ ಹಲೀಂ ಅನ್ನು ಸವಿಯುತ್ತಾರೆ.

ಇರಾನಿನ ಈ ಖಾದ್ಯ ರಂಜಾನ್‌ ಮಾಸಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಒಂದು ಪ್ಲೇಟ್‌ ಮಟನ್‌ ಹಲೀಂಗೆ ₹200 ದರವಿದೆ’ ಎಂದು ಹೈದರಾಬಾದಿ ಹಲೀಂ ಹೋಟೆಲ್‌ನ ಮಾಲೀಕ ಶೌಕತ್‌ ಅಹ್ಮದ್‌ ಅವರು ಮಾಹಿತಿ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT