ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರದ ಇಎಸ್‌ಐ ಕಾಲೇಜಿನಲ್ಲಿ ವಿದ್ಯಾರ್ಥಿ ಕೂದಲು ಕತ್ತರಿಸಿ ರ‍್ಯಾಗಿಂಗ್

ಐವರು ಜೈಲುಪಾಲು
Last Updated 27 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ‘ಇಎಸ್‌ಐ’ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಯ ಕೂದಲು ಕತ್ತರಿಸಿ ರ‍್ಯಾಗಿಂಗ್‌ ಮಾಡಿದ ಆರೋಪದಡಿ, ಕಾಲೇಜಿನ ಐವರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಕರಣ್‌ ಶರ್ಮ, ಉತ್ತರಾಖಂಡದ ಇಂದ್ರಜಿತ್, ದೆಹಲಿಯ ರಾಹುಲ್‌ಜಾ, ಉತ್ತರ ಪ್ರದೇಶದ ಶುಭವ್ ಹಾಗೂ
ಮಧ್ಯಪ್ರದೇಶದ ಗೌತಮ್ ಬಂಧಿತರು. ಇವರೆಲ್ಲ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳು.

‘ರ‍್ಯಾಗಿಂಗ್ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ಮಂಗಳವಾರ ದೂರು ನೀಡಿದ್ದರು. ಕರ್ನಾಟಕ ಶಿಕ್ಷಣ ಕಾಯ್ದೆ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು, ವಿದ್ಯಾರ್ಥಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ರಾಜಾಜಿನಗರ ಪೊಲೀಸರು ಹೇಳಿದರು.

‘ಇಎಸ್‌ಐ ಆಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯವಿದೆ. ಅಲ್ಲಿಯೇ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳು ಉಳಿದುಕೊಂಡಿ
ದ್ದರು. ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳಿಗೆ ನಿತ್ಯವೂ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ. ಅದನ್ನು ಪ್ರಶ್ನಿಸುತ್ತಿದ್ದವರ ಮೇಲೆಯೇ ಹಲ್ಲೆ ಮಾಡಿ ರ‍್ಯಾಗಿಂಗ್ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಸಂತ್ರಸ್ತ, ದೂರು ನೀಡುತ್ತಿದ್ದಂತೆ ಕಾಲೇಜಿಗೆ ಹೋಗಿ ವಿಚಾರಣೆ ನಡೆಸಲಾಯಿತು. ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಅವರೆಲ್ಲ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಕಪಾಳಕ್ಕೆ ಹೊಡೆದರು: ‘ಪಾನಮತ್ತರಾಗಿದ್ದ ಆರೋಪಿಗಳು, ಡಿ. 24ರ ರಾತ್ರಿ 10ರ ಸುಮಾರಿಗೆ ಸಂತ್ರಸ್ತ ವಾಸವಿದ್ದ ಕೊಠಡಿಗೆ ನುಗ್ಗಿ ಕಪಾಳಕ್ಕೆ ಹೊಡೆದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಎಳೆದಾಡಿದ್ದರು. ನಂತರ, ಸಂತ್ರಸ್ತ ವಿದ್ಯಾರ್ಥಿಯನ್ನು ಟೆರಸ್ ಮೇಲೆ ಎಳೆದೊಯ್ದಿದ್ದರು’ ಎಂದು ಪೊಲೀಸರು ಹೇಳಿದರು.

'ಸಂತ್ರಸ್ತನ ತಲೆಯ ಹಿಂಭಾಗದ ಕೂದಲು ಕತ್ತರಿಸಿ ಅವಮಾನಿಸಿದ್ದ ಆರೋಪಿಗಳು, ಅವರನ್ನು ವಿವಸ್ತ್ರಗೊಳಿಸಲು ಯತ್ನಿಸಿದ್ದರು. ‘ನೀನು ಎಂಬಿಬಿಎಸ್ ವ್ಯಾಸಂಗ ಮಾಡಲು ಯೋಗ್ಯತೆ ಇಲ್ಲದ ಜಾತಿಯವನು’ ಎಂದು ಹೇಳಿ ಜಾತಿ ನಿಂದನೆ ಮಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮರುದಿನ ಡಿ.25ರಂದು ಸಂತ್ರಸ್ತನನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದರು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ತಿಳಿಸಿದರು.

‘ರ‍್ಯಾಗಿಂಗ್‌ ಬಗ್ಗೆ ಇಎಸ್‌ಐ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಇಂಥ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT