ಬೆಂಗಳೂರು: ಪದವಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅಪರಿಚಿತ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಎಚ್‌ಎಸ್‌ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಹೊಸೂರು ಸರ್ವಿಸ್ ರಸ್ತೆ ಬಳಿ ರಾತ್ರಿ 1 ರಿಂದ 1.30ರ ಅವಧಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಆಕೆ ಚೇತರಿಸಿಕೊಳ್ಳುತ್ತಿದ್ದು, ಸ್ನೇಹಿತ ನೀಡಿದ ದೂರು ಆಧರಿಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿದ್ಯಾರ್ಥಿನಿ, ನಗರದ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಶನಿವಾರ ತಡರಾತ್ರಿವರೆಗೂ ಕೋರಮಂಗಲ ಪಬ್‌ನಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದಾರೆ. ಬಳಿಕ ಸ್ನೇಹಿತರೊಂದಿಗೆ ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಎರಡು ಆಟೊಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಟೊ ಚಾಲಕರು ಹಾಗೂ ಯುವತಿಯ ಸ್ನೇಹಿತರ ನಡುವೆ ಜಗಳ ನಡೆದಿದೆ. ಸ್ಥಳಕ್ಕೆ ಹೊಯ್ಸಳ ವಾಹನ ಸಹ ಬಂದಿತ್ತು. ಆ ಸಂದರ್ಭದಲ್ಲಿ ಕಾರು ಬಿಟ್ಟು ಆಕೆ ಆಟೊದಲ್ಲಿ ತೆರಳಿದ್ದಾರೆ. ಸ್ವಲ್ಪ ದೂರ ತೆರಳಿದ ಬಳಿಕ ಆಟೊದಿಂದ ಇಳಿದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಡ್ರಾಪ್ ಕೇಳಿ, ಅವರೊಂದಿಗೆ ಹೊರಟಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬೈಕ್ ಸವಾರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ತನ್ನ ಮೊಬೈಲ್‌ನಲ್ಲಿದ್ದ ಎಸ್‌ಒಎಸ್ ಬಟನ್ ಒತ್ತಿದ್ದಾರೆ. ಆಕೆಯ ತಂದೆ ಮತ್ತು ಸ್ನೇಹಿತರ ಮೊಬೈಲ್‌ಗೆ ತುರ್ತು ಸಂದೇಶ ಮತ್ತು ಲೋಕೇಷನ್ ಹೋಗಿದೆ. ಇದೇ ವೇಳೆ, ಸ್ನೇಹಿತರು ಯುವತಿಗೆ ಕರೆ ಮಾಡಿದ್ದಾರೆ, ಆದರೆ ಆಕೆ ಕರೆ ಸ್ವೀಕರಿಸಲಿಲ್ಲ. ನಂತರ ಲೋಕೇಷನ್ ಆಧರಿಸಿ ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿ ನಿಲ್ಲಿಸುವ ಜಾಗಕ್ಕೆ ಬಂದಿದ್ದಾರೆ. ಅಲ್ಲಿ ಬೆತ್ತಲೆ ಸ್ಥಿತಿಯಲ್ಲಿದ್ದ ಆಕೆಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಘಟನಾ ಸ್ಥಳದಲ್ಲಿ ಒಬ್ಬ ಅಪರಿಚಿತ ಯುವಕ ಕೇವಲ ಪ್ಯಾಂಟ್ನಲ್ಲಿ ನಿಂತಿದ್ದ. ಗಾಬರಿಯಲಿದ್ದ ಆತನ ಮುಖದಲ್ಲಿ ಪರಚಿದ ಗಾಯಗಳಾಗಿತ್ತು. ಸ್ನೇಹಿತರು ಆತನನ್ನು ಹಿಡಿಯಲು ಯತ್ನಿಸಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ.
‘ಅಪರಿಚಿತ ವ್ಯಕ್ತಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂದು ಯುವತಿ, ಸ್ನೇಹಿತರಿಗೆ ಹೇಳಿದ್ದಾಳೆ. ಆಕೆಯ ಪೋಷಕರಿಗೂ ವಿಷಯ ತಿಳಿಸಲಾಗಿದ್ದು, ಅವರು ನಗರಕ್ಕೆ ಬಂದಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಯುವತಿ ಮೈ ಮೇಲೂ ಪರಿಚಿದ ಗಾಯಗಳಾಗಿದ್ದು, ಲೈಂಗಿಕ ದೌರ್ಜನ್ಯ ನಡೆಸಿರುವುದು ಸ್ಪಷ್ಟವಾಗಿದೆ. ಆಕೆ, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಲಾಗವುದು’ ಎಂದು ಮೂಲಗಳು ತಿಳಿಸಿವೆ.
ಆರೋಪಿ ಸುಳಿವು ಲಭ್ಯ
‘ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಅವರ ಹೇಳಿಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದೇವೆ. ಬಿಎನ್‌ಎಸ್ 64ರ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ಸುಳಿವು ಲಭ್ಯವಾಗಿದ್ದು, ಬಂಧನಕ್ಕೆ ಐದು ತಂಡ ರಚಿಸಲಾಗಿದೆ’ ಎಂದು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣಾ ಗುಪ್ತಾ ತಿಳಿಸಿದ್ದಾರೆ.
‘ಅತ್ಯಾಚಾರಿಗಳ ಅಟ್ಟಹಾಸ ಮೇರೆ ಮೀರಿದೆ’
ಬೆಂಗಳೂರು: ‘ರಾಜ್ಯದಲ್ಲಿ ಸ್ತ್ರೀಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗಿದೆ. ಸರಣಿ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಸರ್ಕಾರ ಕಣ್ಮುಚಿ ಕುಳಿತುಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
‘ಬೆಂಗಳೂರಿನ ಎಚ್‌ಎಸ್‌ಆರ್‌ಲೇಔಟ್‌ನಲ್ಲಿ ಆಟೋದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಅತ್ಯಂತ ಹೇಯ ಹಾಗೂ ರಾಕ್ಷಸೀ ಕೃತ್ಯವಾಗಿದೆ. ಮರುಕಳಿಸುತ್ತಲೇ ಇರುವ ಇಂಥಾ ಘಟನೆಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ’ ಎಂದು ‘ಎಕ್ಸ್’ ನಲ್ಲಿ ತಿಳಿಸಿದ್ದಾರೆ.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆ ಕುಗ್ಗುತ್ತಿದೆ. ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಯಾರೊಬ್ಬರೂ ಈ ಬಗ್ಗೆ ಗಂಭೀರತೆ ಪ್ರದರ್ಶಿಸದೇ ಉಡಾಫೆ ಧೋರಣೆ ಅನುಸರಿಸುತ್ತಿರುವ ಪರಿ ನೋಡಿದರೆ ಸರ್ಕಾರವೇ ಸ್ತ್ರೀಕುಲ ಪೀಡಕರ ರಕ್ಷಣೆಗೆ ನಿಂತಿರುವ ಅನುಮಾನ ಮೂಡಿಸುತ್ತಿದೆ. ತಕ್ಷಣವೇ ಯುವತಿಯ ರಕ್ಷಣೆಗೆ ಮುಂದಾಗಿ ಪೈಶಾಚಿಕ ಕೃತ್ಯ ಎಸಗಿದ ಕಿಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.