ಬುಧವಾರ, ನವೆಂಬರ್ 13, 2019
18 °C
ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯಿಸಿಕೊಂಡು ಕೃತ್ಯ, ಮಹದೇವಪುರದಲ್ಲಿ ಎಫ್‌ಐಆರ್‌

ಅತ್ಯಾಚಾರ ಆರೋಪ; ಪಿಎಸ್‌ಐ ಅಮಾನತು

Published:
Updated:
Prajavani

ಬೆಂಗಳೂರು: ಮದುವೆ ಆಗುವುದಾಗಿ ಹೇಳಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಎದುರಿಸುತ್ತಿರುವ ಕೇಂದ್ರ ಐಜಿಪಿ ಕಚೇರಿಯ ಪಿಎಸ್‌ಐ ಬಿ.ಎನ್. ಶರತ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಪಿಎಸ್‌ಐ ವಿರುದ್ಧ ಮಹದೇವಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅಲ್ಲಿಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಅಮಾನತು ಮಾಡಲಾಗಿದೆ. ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ’ ಎಂದು ಕೇಂದ್ರ ವಲಯದ ಐಜಿಪಿ ಶರತ್‌ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಫೇಸ್‌ಬುಕ್‌ನಲ್ಲಿ ಪರಿಚಯ: ‘ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ವಿಚ್ಛೇದನ ಪಡೆದಿದ್ದ 37 ವರ್ಷದ ಮಹಿಳೆ, ಪ್ರತ್ಯೇಕವಾಗಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಾಮನಗರದ ಡಿಸಿಆರ್‌ಬಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 2016ರಲ್ಲಿ ಮಹಿಳೆಯ ಫೇಸ್‌ಬುಕ್‌ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಮಹಿಳೆ ಸ್ವೀಕರಿಸಿದ್ದರು. ನಂತರ, ಅವರಿಬ್ಬರು ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು.’

‘ಮಹಿಳೆ ಪತಿಯಿಂದ ದೂರವಾಗಿದ್ದನ್ನು ತಿಳಿದುಕೊಂಡಿದ್ದ ಆರೋಪಿ, ಮದುವೆ ಪ್ರಸ್ತಾಪ ಮುಂದಿಟ್ಟಿದ್ದರು. ಮಹಿಳೆಯನ್ನು ಬಿಟ್ಟು ಬೇರೆ ಯಾವ ಹುಡುಗಿಯನ್ನು ಮದುವೆ ಆಗುವುದಿಲ್ಲವೆಂದು ಹೇಳಿ ಕುಟುಂಬದವರನ್ನೂ ನಂಬಿಸಿದ್ದರು. ಆಗಾಗ ಮಹಿಳೆಯನ್ನು ಭೇಟಿಯಾಗುತ್ತಿದ್ದ ಆರೋಪಿ, ಅವರ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಬೇಗನೇ ಮದುವೆಯಾಗೋಣವೆಂದು ಮಹಿಳೆ ಒತ್ತಾಯಿಸುತ್ತಿದ್ದರು. ಅದಕ್ಕೆ ನಿರಾಕರಿಸಿದ್ದ ಆರೋಪಿ, ‘ನೀನು ಸರಿ ಇಲ್ಲ. ಪತಿಯನ್ನು ಬಿಟ್ಟು ಬಂದಿದ್ದು, ನಿನ್ನ ನಡತೆಯೂ ಚೆನ್ನಾಗಿಲ್ಲ. ಮದುವೆಯಾಗುವಂತೆ ಬಹಳ ಒತ್ತಾಯಿಸಿದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು. ನೊಂದ ಮಹಿಳೆ, ಮಹದೇವಪುರ ಠಾಣೆಗೆ ಜೂನ್ 8ರಂದು ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅತ್ಯಾಚಾರ (ಐಪಿಸಿ 376), ನಂಬಿಸಿ ವಂಚನೆ (ಐಪಿಸಿ 417) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್‌ ದಾಖಲಾಗಿತ್ತು. ಆರೋಪಗಳಿಗೆ ಸಂಬಂಧಪಟ್ಟ ಪುರಾವೆಗಳು ತನಿಖೆ ವೇಳೆ ಲಭ್ಯವಾಗಿದ್ದು, ಅದರನ್ವಯ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. 

ಪ್ರತಿಕ್ರಿಯಿಸಿ (+)