ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೌಶಲಯುಕ್ತ ಉದ್ಯೋಗಿಗಳ ಸೃಷ್ಟಿಯ ಗುರಿ’: ಹರೀಶ್‌ ಕುಮಾರ್

Last Updated 4 ಅಕ್ಟೋಬರ್ 2021, 14:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕೌಶಲಯುಕ್ತ ಉದ್ಯೋಗಿಗಳ ಸೃಷ್ಟಿಯೇ ಶಿಶಿಕ್ಷು ಮೇಳದ ಮೂಲ ಧ್ಯೇಯ. ಅಭ್ಯರ್ಥಿಗಳನ್ನು ಔದ್ಯೋಗಿಕ ವಲಯಕ್ಕೆ ಅಣಿಗೊಳಿಸುವ ಗುರಿಯೂ ಇದರ ಹಿಂದೆ ಅಡಗಿದೆ’ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಕೆ.ಹರೀಶ್‌ ಕುಮಾರ್ ತಿಳಿಸಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಹೊಸೂರು ರಸ್ತೆಯ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಶಿಕ್ಷು ಮೇಳ–2021’ ಉದ್ಘಾಟಿಸಿ ಸೋಮವಾರ ಮಾತನಾಡಿದರು.

‘ಉದ್ಯೋಗಾಕಾಂಕ್ಷಿಗಳ ಹಾಗೂ ಪ್ರಮುಖ ಕಂಪನಿಗಳ ನಡುವೆ ಬಾಂಧವ್ಯ ಬೆಸೆಯಲೂ ಈ ಮೇಳ ಸಹಕಾರಿಯಾಗಲಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯು ಮಾಸಿಕ ₹10 ಸಾವಿರ ಗೌರವಧನ ನೀಡಲಿದೆ. ಸರ್ಕಾರವು ಪ್ರತಿ ಅಭ್ಯರ್ಥಿಗೆ ₹2,500 ರಂತೆ ಕಂಪನಿಗಳಿಗೆ ಹಣ ಪಾವತಿಸಲಿದೆ’ ಎಂದರು.

‘30ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಉದ್ದಿಮೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಕೋರ್ಸ್‌ಗಳಿಗೆ ಅನುಗುಣವಾಗಿ 6 ತಿಂಗಳಿಂದ 3 ವರ್ಷದವರೆಗೂ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ಅಭ್ಯರ್ಥಿಗಳನ್ನು ಕಂಪನಿಗಳು ಕೆಲಸಕ್ಕೆ ನೇಮಿಸಿಕೊಳ್ಳುವ ಅವಕಾಶವೂ ಇದೆ. ಇದರಿಂದ ಕಂಪನಿಗೆ ಹೆಚ್ಚು ಲಾಭವಾಗಲಿದೆ. ಹೊಸದಾಗಿ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ಮತ್ತೆ ತರಬೇತಿ ನೀಡುವ ಪ್ರಮೇಯವೇ ಎದುರಾಗುವುದಿಲ್ಲ. ಇದರಿಂದ ತರಬೇತಿ ವೆಚ್ಚವೂ ಉಳಿಯುತ್ತದೆ. ಅನುಭವಿ ಹಾಗೂ ಕೌಶಲಯುಕ್ತ ಉದ್ಯೋಗಿಗಳು ದೊರೆತಂತಾಗುತ್ತದೆ’ ಎಂದೂ ವಿವರಿಸಿದರು.

366 ಅಭ್ಯರ್ಥಿಗಳು ಆಯ್ಕೆ: ಬಿಎಚ್‌ಇಎಲ್‌, ಎಚ್‌ಎಎಲ್‌, ಟಿವಿಎಸ್‌, ಟಾಟಾ ಮೋಟರ್ಸ್‌, ಬಾಷ್‌ ಸೇರಿದಂತೆ ಒಟ್ಟು 65 ಕಂಪನಿಗಳು ಶಿಶಿಕ್ಷು ಮೇಳದಲ್ಲಿ ಭಾಗವಹಿಸಿದ್ದವು. ಒಟ್ಟು 1,200 ಅಭ್ಯರ್ಥಿಗಳ ಪೈಕಿ 366 ಜನ ವಿವಿಧ ಕಂ‍ಪನಿಗಳಿಗೆ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT