ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಕಲಾಕ್ಷೇತ್ರಕ್ಕೆ ಸಿಗಲಿದೆ ಆಧುನಿಕ ಸ್ಪರ್ಶ

ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಸೇರಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆಗೆ ಪ್ರಸ್ತಾವ * ವಜ್ರ ಮಹೋತ್ಸವದ ಪ್ರಯುಕ್ತ ಸಂಸ್ಕೃತಿ ಇಲಾಖೆ ಕ್ರಮ
Published 27 ಜನವರಿ 2024, 0:30 IST
Last Updated 27 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದ್ದು, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಸೇರಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಇಲ್ಲಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ನವೀಕರಣಕ್ಕೆ ₹24 ಕೋಟಿ ವೆಚ್ಚವಾಗಲಿದೆಯೆಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ. 1963ರಲ್ಲಿ ಲೋಕಾರ್ಪಣೆಗೊಂಡ ಈ ರಂಗಮಂದಿರ, ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಸೇರಿ ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೈಗೆಟಕುವ ದರದಲ್ಲಿ ವೇದಿಕೆಯನ್ನು ಕಲ್ಪಿಸುತ್ತಿದೆ. 60 ವರ್ಷಗಳಲ್ಲಿ ತಂತ್ರಜ್ಞಾನ ಸೇರಿ ವಿವಿಧ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಯಾಗಿರುವುದರಿಂದ ಈಗ ಇಲಾಖೆ ನವೀಕರಣಕ್ಕೆ ಮುಂದಾಗಿದೆ. ಈ ಸಂಬಂಧ ರಂಗಕರ್ಮಿಗಳಿಂದಲೂ ಅಗತ್ಯ ಸಲಹೆಗಳನ್ನು ಪಡೆದು, ಆಧುನಿಕ ಸೌಲಭ್ಯ ಕಲ್ಪಿಸಲು ಕ್ರಮವಹಿಸಿದೆ. 

‌ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗ ಮಂದಿರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ. ನಗರದ ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳಿಗೆ ಆದ್ಯತೆ ನೀಡಲಾಗುತ್ತಿದೆಯಾದರೂ ರಂಗ ತಂಡಗಳು ಪ್ರದರ್ಶನ ನೀಡಲು ಎರಡು ತಿಂಗಳು ಮುಂಚಿತವಾಗಿ ಕಾಯ್ದಿರಿಸಿ, ಕಾಯಬೇಕಾದ ಪರಿಸ್ಥಿತಿಯಿದೆ. ಅದು ಕೂಡ ಸರ್ಕಾರಿ ಕಾರ್ಯಕ್ರಮಗಳು ತುರ್ತಾಗಿ ನಿಗದಿಯಾದಲ್ಲಿ ಕಾಯ್ದಿರಿಸಿದ ದಿನಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ, ಪ್ರದರ್ಶನದ ದಿನದವರೆಗೂ ರಂಗಮಂದಿರ ಸಿಗುವ ಖಚಿತತೆ ಇಲ್ಲದಂತಾಗಿದೆ. 830 ಆಸನಗಳನ್ನು ಹೊಂದಿರುವ ರವೀಂದ್ರ ಕಲಾಕ್ಷೇತ್ರವು ವರ್ಷದ ಬಹುತೇಕ ದಿನ ಕಲಾ ಚಟುವಟಿಕೆಗಳಿಂದ ಕೂಡಿರುತ್ತಿದೆ.

5 ವರ್ಷದ ಹಿಂದೆ ನವೀಕರಣ: ಸಂಸ್ಕೃತಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ 2018ರಲ್ಲಿ ₹ 2.24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಿತ್ತು. ಆಗ ಹೊಸದಾಗಿ ಧ್ವನಿ–ಬೆಳಕಿನ ವ್ಯವಸ್ಥೆಯನ್ನು ಅಳವಡಿಸ ಲಾಗಿತ್ತು. 2022ರಲ್ಲಿ ರಂಗಮಂದಿರಗಳ ಬಾಡಿಗೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದ ಸಂಸ್ಕೃತಿ ಇಲಾಖೆ, ಪ್ರತಿ ವರ್ಷ ಬಾಡಿಗೆ ದರವನ್ನು ಶೇ 5 ರಷ್ಟು ಏರಿಕೆ ಮಾಡಬೇಕೆಂದು ತಿಳಿಸಿತ್ತು. ಸರ್ಕಾರಿ ಆದೇಶದ ಅನ್ವಯ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ಕಳೆದ ವರ್ಷ ಶೇ 5ರಷ್ಟು ಹೆಚ್ಚಳ ಮಾಡಲಾಗಿತ್ತು. ಸದ್ಯ ಒಂದು ಪಾಳಿಗೆ ₹5 ಸಾವಿರ ಠೇವಣಿ ಹಾಗೂ ಜಿಎಸ್‌ಟಿ ಸಹಿತ ₹ 12,434 ಬಾಡಿಗೆಯಿದ್ದು, ಠೇವಣಿ ಹಣವನ್ನು ಮರಳಿಸಲಾಗುತ್ತದೆ.

‘ರವೀಂದ್ರ ಕಲಾಕ್ಷೇತ್ರ ನವೀಕರಣಕ್ಕೆ ಸಂಬಂಧಿಸಿದಂತೆ ರಂಗಕರ್ಮಿಗಳ ಜತೆಗೆ ಸಭೆ ನಡೆಸಿ, ಅಗತ್ಯ ಸಲಹೆಗಳನ್ನು ಪಡೆಯಲಾಗಿದೆ. ಈ ಕಲಾಕ್ಷೇತ್ರವು ವಜ್ರಮಹೋತ್ಸವ ಸಂಭ್ರಮದಲ್ಲಿ ಇರುವುದರಿಂದ ನವೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಬೆಳಕು, ಧ್ವನಿ ಸೇರಿ ಸಂಪೂರ್ಣ ವ್ಯವಸ್ಥೆಯ ನವೀಕರಣ ಪ್ರಸ್ತಾವದಲ್ಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

ರವೀಂದ್ರ ಕಲಾಕ್ಷೇತ್ರ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಬಳಿಕ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಧರಣಿದೇವಿ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಬಯಲು ರಂಗಮಂದಿರವೂ ನವೀಕರಣ

ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರವನ್ನೂ ನವೀಕರಿಸಲು ಸಂಸ್ಕೃತಿ ಇಲಾಖೆ ಮುಂದಾಗಿದೆ. ಈ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳು ರವೀಂದ್ರ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿದ್ದವು. ಆದ್ದರಿಂದ ಧ್ವನಿ ವ್ಯವಸ್ಥೆ ರವೀಂದ್ರ ಕಲಾಕ್ಷೇತ್ರಕ್ಕೆ ಕೇಳಿಸದಿರಲು ತಡೆಗೋಡೆ ನಿರ್ಮಾಣ ಸೇರಿ ವಿವಿಧ ನವೀಕರಣ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎರಡೂ ರಂಗಮಂದಿರಗಳ ನವೀಕರಣ ಕಾಮಗಾರಿ ಯನ್ನು ಏಕಕಾಲದಲ್ಲಿ ಕೈಗೊಂಡರೆ ರಂಗ ಚಟುವಟಿಕೆಗಳ ಪ್ರದರ್ಶನಕ್ಕೆ ಅಡ್ಡಿಯಾಗಲಿದೆ. ಆದ್ದರಿಂದ ಮೊದಲು ಸಂಸ ಬಯಲು ರಂಗಮಂದಿರ ನವೀಕರಿಸಿ ಬಳಿಕ ರವೀಂದ್ರ ಕಲಾಕ್ಷೇತ್ರ ನವೀಕರಣ ಮಾಡಲು ಇಲಾಖೆ ಮುಂದಾಗಿದೆ.  

ಏನೆಲ್ಲ ಅಳವಡಿಕೆ?

ರವೀಂದ್ರ ಕಲಾಕ್ಷೇತ್ರದಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ ಅಳವಡಿಕೆ ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಧ್ವನಿ–ಬೆಳಕಿನ ವ್ಯವಸ್ಥೆ ಅಳವಡಿಸುವುದೂ ಪ್ರಸ್ತಾವದಲ್ಲಿದೆ. ಒಟ್ಟು 20 ಅಂಶಗಳು ಸೇರಿದ್ದು ವೇದಿಕೆ ಮಧ್ಯಭಾಗವನ್ನು ಮೇಲಕ್ಕೆ ಏರಿಸಲು ಹೈಡ್ರಾಲಿಕ್ ವ್ಯವಸ್ಥೆ ಆಸನಗಳಿಗೆ ಜಲ ನಿರೋಧಕ (ವಾಟರ್‌ ಫ್ರೂಪ್‌) ವ್ಯವಸ್ಥೆಯೂ ಸೇರಿದೆ. ಉಳಿದಂತೆ ವೇದಿಕೆಯ ನೆಲಹಾಸು ಸೇರಿ ಸಮಗ್ರ ನವೀಕರಣ ಪ್ರಸ್ತಾವದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT