ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಜಿಪಿ ಡಾ. ರವೀಂದ್ರನಾಥ್‌ ರಾಜೀನಾಮೆ ಅಂಗೀಕಾರ ಬೇಡ: ವಿಪಕ್ಷಗಳ ಆಗ್ರಹ

ರವೀಂದ್ರನಾಥ್‌ ವಿಚಾರ: ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ, ವಿಪಕ್ಷಗಳ ಆಗ್ರಹ
Published : 11 ಮೇ 2022, 19:34 IST
ಫಾಲೋ ಮಾಡಿ
Comments

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಪೊಲೀಸ್‌ ಮಹಾನಿರ್ದೇಶಕರ (ಡಿಜಿಪಿ) ಹುದ್ದೆಯಿಂದ ವರ್ಗಾವಣೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಐಪಿಎಸ್‌ ಅಧಿಕಾರಿ ಡಾ. ರವೀಂದ್ರನಾಥ್‌ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ವಿಧಾನಮಂಡಲದ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಕಲ್ಯಾಣ ಸಮಿತಿ ಮತ್ತು ವಿರೋಧ ಪಕ್ಷಗಳು ಆಗ್ರಹಿಸಿವೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರನ್ನು ಭೇಟಿಮಾಡಿದ ವಿಧಾನ ಮಂಡಲದ ಎಸ್‌ಸಿ ಮತ್ತು ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ ನೇತೃತ್ವದ ನಿಯೋಗ, ರವೀಂದ್ರನಾಥ್‌ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿತು. ಶಾಸಕರಾದ ಎನ್‌. ಮಹೇಶ್‌, ಪಿ. ರಾಜೀವ್‌, ಅಬ್ಬಯ್ಯ ಪ್ರಸಾದ್‌, ಪ್ರೊ. ಲಿಂಗಣ್ಣ ನಿಯೋಗದಲ್ಲಿದ್ದರು.

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದು, ಸರ್ಕಾರಿ ನೌಕರಿ ಪಡೆದಿರುವ ಪ್ರಕರಣಗಳ ಕುರಿತು ನಮ್ಮ ಸಮಿತಿ ವಿಚಾರಣೆ ನಡೆಸುತ್ತಿದೆ. ಸಮಿತಿ ನಿರ್ಧಾರದಂತೆ ರವೀಂದ್ರನಾಥ್‌ ಅವರು ಕೆಲವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಅವರ ವರ್ಗಾವಣೆ ಸರಿಯಲ್ಲ. ಅವರು ನೀಡಿರುವ ರಾಜೀನಾಮೆ ಅಂಗೀಕರಿಸದಂತೆ ಒತ್ತಾಯಿಸಿದ್ದೇವೆ. ರವೀಂದ್ರನಾಥ್‌ ರಾಜೀನಾಮೆ ಹಿಂಪಡೆಯುವುದಕ್ಕೆ ತಮ್ಮ ಅಭ್ಯಂತರವಿಲ್ಲ ಎಂಬುದಾಗಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ’ ಎಂದರು.

ಗಣ್ಯ ವ್ಯಕ್ತಿ ರಕ್ಷಣೆಗೆ ಯತ್ನ: ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ದಲಿತ ಸಮುದಾಯಕ್ಕೆ ಸೇರಿದ ದಕ್ಷ ಅಧಿಕಾರಿಯಾದ ರವೀಂದ್ರನಾಥ್‌ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ದೊಡ್ಡ ತಿಮಿಂಗಲಗಳಿಗೆ ಬಲೆ ಹಾಕಿದ್ದರು. ಸರ್ಕಾರ ಹಾಗೂ ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಪ್ರಯತ್ನ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಗೃಹ ಸಚಿವರ ಸಲಹೆಗಾರರಾಗಿದ್ದ ‘ಗಣ್ಯ ವ್ಯಕ್ತಿ’ಗೆ ನೋಟಿಸ್‌ ನೀಡಿದ ಬಳಿಕ ರವೀಂದ್ರನಾಥ್‌ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಇದು ಕಾಂಗ್ರೆಸ್‌– ಬಿಜೆಪಿ ನಡುವಿನ ಒಳ ಒಪ್ಪಂದಕ್ಕೆ ಸಾಕ್ಷಿ. ಸರ್ಕಾರದ ಧೋರಣೆಗೆ ಬೇಸತ್ತು ಅಧಿಕಾರಿ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.

‘ರಾಜೀನಾಮೆ ಅಂಗೀಕರಿಸಬಾರದು’: ‘ನಕಲಿ ಜಾತಿ ಪ್ರಮಾಣಪತ್ರಗಳ ಕುರಿತು ತನಿಖೆ ನಡೆಸುತ್ತಿದ್ದ ರವೀಂದ್ರನಾಥ್‌ ರಾಜೀನಾಮೆ ನೀಡಿರುವುದು ಬೇಸರದ ಸಂಗತಿ. ಅವರ ರಾಜೀನಾಮೆ ಅಂಗೀಕರಿಸುವುದು ಬೇಡ. ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಸರ್ಕಾರ ರೇಣುಕಾಚಾರ್ಯ ಅಂಥವರ ರಕ್ಷಣೆಗೆ ನಿಂತಿದೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ. ಮಹದೇವಪ್ಪ ಆರೋಪಿಸಿದ್ದಾರೆ.

‘ರೇಣುಕಾಚಾರ್ಯ ಪ್ರಕರಣ ಕಾರಣ’
‘ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಮಗಳು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರವೀಂದ್ರನಾಥ್‌ ನೋಟಿಸ್‌ ಜಾರಿಗೊಳಿಸಿದ್ದರು. ಈ ಕಾರಣಕ್ಕಾಗಿ ಅವರ ವರ್ಗಾವಣೆ ಮಾಡಲಾಗಿತ್ತು ಎಂಬ ಮಾಹಿತಿ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಸೇರಿದಂತೆ ಯಾರೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಯಲಿ. ಡಿಸಿಆರ್‌ಇ ಡಿಜಿಪಿ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅವರ ರಾಜೀನಾಮೆ ‍ಪತ್ರವನ್ನೂಅಂಗೀಕರಿಸಬಾರದು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT