ಶನಿವಾರ, ನವೆಂಬರ್ 16, 2019
24 °C

ಆರ್‌ಸಿಇಪಿ: ರೈತರ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ‘ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ (ಆರ್‌ಸಿಇಪಿ) ಹೊರಗಿಡಬೇಕು’ ಎಂದು ಒತ್ತಾಯಿಸಿ ಹಾಲು ಉತ್ಪಾದಕ ರೈತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ರೈತರು, ಒಪ್ಪಂದದ ವಿರುದ್ಧದ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ರಾಜ್ಯದ ಬಹುತೇಕ ರೈತರು ಹಸು ಸಾಕಿಕೊಂಡು ಉಪಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಸರ್ಕಾರವು ಆರ್‌ಸಿಇಪಿ ಒಪ್ಪಂದದ ಮೂಲಕ ಅಂಥ ರೈತರ ಹೊಟ್ಟೆ ಮೇಲೆ ಬರೆ ಎಳೆಯಲು ಹೊರಟಿದೆ. ಇದು ರೈತ ವಿರೋಧಿ ಒಪ್ಪಂದವಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ‘ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒಪ್ಪಂದದಿಂದ ಹೊರಗಿಡುವಂತೆ ಆಗ್ರಹಿಸಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು’ ಎಂದು ಎಚ್ಚರಿಸಿದರು.

‘ಒಪ್ಪಂದ ವಿರೋಧಿಸಿ ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಹಾಲು ಉತ್ಪಾದಕರು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ನಾವು ಸಹ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರಿಗೆ ಮನವಿ ರವಾನಿಸಲಾಗಿದೆ’ ಎಂದು ಹೇಳಿದರು.  

ಆರ್‌ಸಿಇಪಿ ವಿರುದ್ಧ ಕಾಂಗ್ರೆಸ್‌ ಹೋರಾಟ
‘ಆರ್‌ಸಿಇಪಿ ಒಪ್ಪಂದದಿಂದ ದೇಶಕ್ಕೆ ದೊಡ್ಡ ಹಾನಿಯಾಗಲಿದೆ. ಒಪ್ಪಂದಕ್ಕೆ ಪ್ರಧಾನಿ ಮೋದಿ ಅವರು ಸಹಿ ಹಾಕುತ್ತಾರೋ, ಇಲ್ಲವೋ ಎಂಬುದು ಸ್ಪಷ್ಟವಿಲ್ಲ. ಈಗಿನ ಸ್ಥಿತಿಯಲ್ಲಿ ಒಪ್ಪಂದಕ್ಕೆ ಕಾಂಗ್ರೆಸ್‌ನ ಸ್ಪಷ್ಟ ವಿರೋಧ ಇದೆ. ಸಾರ್ವಜನಿಕ ಚರ್ಚೆ ಇಲ್ಲದೆ ಇದಕ್ಕೆ ಸಹಿ ಹಾಕಿದ್ದೇ ಆದರೆ ಕಾಂಗ್ರೆಸ್‌ ಬೀದಿಗಿಳಿದು ಹೋರಾಡಲಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಸಿದರು.

‘ಕೇಂದ್ರ ಸರ್ಕಾರ ರಹಸ್ಯವಾಗಿ ಒಪ್ಪಂದ ಜಾರಿಗೆ ಮುಂದಾಗಿದೆ. ಇದು ಜಾರಿಗೆ ಬಂದರೆ ನಮ್ಮ ರೈತರು, ಉದ್ಯಮಗಳಿಗೆ ಬಹಳ ಹೊಡೆತ ಬೀಳಲಿದೆ’ ಎಂದು ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಕ್ರಿಯಿಸಿ (+)