ಮಂಗಳವಾರ, ಸೆಪ್ಟೆಂಬರ್ 29, 2020
21 °C

ಬೇಡಿಕೆ ಕುಸಿತ: ಗ್ರಾಹಕರ ಓಲೈಕೆಗೆ ರಿಯಲ್ ಎಸ್ಟೇಟ್ ಕಂಪನಿಗಳ ಸ್ಪರ್ಧೆ

ಮಹೇಶ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಸ್ವಂತ ಮನೆ, ನಿವೇಶನ ಖರೀದಿ ಅನೇಕರ ಕನಸು. ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳಲು ಜೀವಮಾನವಿಡೀ ದುಡಿದ ಹಣವನ್ನು ವಿನಿಯೋಗಿಸುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಸೈಟ್ ಅಥವಾ ಮನೆ ಕೊಳ್ಳುವುದು ಸಾಮಾನ್ಯರಿಗೆ ಕನಸಿನ ಮಾತು. ಆದರೂ ಆಸೆ, ಕನಸು ಬಿಡಬೇಕಲ್ಲ. ಇಂತಹ ಆಸೆ, ಕನಸುಗಳನ್ನು ನನಸಾಗಿಸಲು ಕೋವಿಡ್ ಸಹಕಾರಿಯಾಗಿದೆ. ಕೋವಿಡ್–19 ಅನೇಕ ವ್ಯವಹಾರಗಳನ್ನು ಬುಡಮೇಲು ಮಾಡಿದೆ. ಅದರಲ್ಲಿ ರಿಯಲ್‌ ಎಸ್ಟೇಟ್ ಉದ್ಯಮ ಕೂಡ ಒಂದು.

ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ವ್ಯವಹಾರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರಿಗೆ ಹಣದ ವಿನಾಯಿತಿಯ ಜೊತೆಗೆ ಅನೇಕ ಕೊಡುಗೆಗಳನ್ನು (ಆಫರ್) ಘೋಷಿಸಿದ್ದಾರೆ. ಆ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುವ ಯೋಚನೆ ಅವರದ್ದು.

ಬಹುತೇಕ ಬಿಲ್ಡರ್‌‌ಗಳು ಒಟ್ಟು ಆಸ್ತಿ ಅಥವಾ ಮನೆ ಮೌಲ್ಯದ ಮೇಲೆ ಶೇ 10 ರಷ್ಟು ವಿನಾಯಿತಿ ಘೋಷಿಸಿದ್ದಾರೆ. ಅಲ್ಲದೇ ಇಎಂಐ ಕಡಿತ, ಕ್ಯಾಶ್‌‌ಬ್ಯಾಕ್ ಯೋಜನೆ, 5 ಗ್ರಾಂ ಚಿನ್ನದ ನಾಣ್ಯ, ಕಾರಿನ ಉಡುಗೊರೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

‘ಕೋವಿಡ್–19 ಆರಂಭಕ್ಕೂ ಮೊದಲು ಕೂಡ ವಿನಾಯಿತಿ ಇತ್ತು. ಆದರೆ ಇದು ಅನಿಶ್ಚಿತತೆಯ ಕಾಲ. ಹಾಗಾಗಿ ಬಿಲ್ಡರ್‌ಗಳು ತಮ್ಮ ರಿಯಾಯಿತಿಯನ್ನು ಶೇ 10ರವರೆಗೆ ಹೆಚ್ಚಿಸಿದ್ದಾರೆ’ ಎಂದು ನೈಟ್ ಫ್ರಾಂಕ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ರಜನಿ ಸಿನ್ಹಾ ಪ್ರತಿಕ್ರಿಯಿಸಿದರು. ಕೆಲ ರಿಯಲ್ ಎಸ್ಟೇಟ್ ಕಂಪನಿಗಳು ಒಂದು ವರ್ಷದವರೆಗೆ ಉಚಿತ ಕ್ಲಬ್ ಹೌಸ್ ಬಳಕೆ, ಕಾರ್ ಪಾರ್ಕಿಂಗ್‌ ವ್ಯವಸ್ಥೆ ಕೂಡ ನೀಡುವ ಮನಸ್ಸು ಮಾಡಿವೆ. ಕೆಲವರು ಸ್ಟ್ಯಾಂಪ್ ಡ್ಯೂಟಿ ಹಾಗೂ ಜಿಎಸ್‌ಟಿಯ ಹೊರೆಯನ್ನು ತಾವೇ ಹೊತ್ತುಕೊಳ್ಳಲು ಮುಂದಾಗಿದ್ದಾರೆ.

'ಎಂಥ ಪ್ರಾಜೆಕ್ಟ್ ಮತ್ತು ಅದು ಯಾವ ಸ್ಥಳದಲ್ಲಿದೆ ಎಂಬುದರ ಆಧಾರದ ಮೇಲೆ ವಿನಾಯಿತಿ ಘೋಷಿಸಿದ್ದೇವೆ' ಎಂದು ಶೋಭಾ ಲಿಮಿಟೆಡ್‌ನ ವಕ್ತಾರರು ಪ್ರತಿಕ್ರಿಯಿಸಿದರು.

ಬ್ರಿಗೇಡ್ ಎಂಟರ್‌ಪ್ರೈಸಸ್‌ ಲಿಮಿಟೆಡ್ ತಮ್ಮ ಗ್ರಾಹಕರಿಗೆ ಹಣ ಪಾವತಿ ವಿಧಾನದಲ್ಲಿ ಕೆಲ ರಿಯಾಯ್ತಿಗಳನ್ನು ಘೋಷಿಸಿದೆ. 'ಬುಕ್ಕಿಂಗ್ ರದ್ದತಿಗೆ ಶುಲ್ಕ ವಿಧಿಸುವುದಿಲ್ಲ' ಎಂದು ಹೇಳಿದ್ದಾರೆ ಕಂಪನಿಯ ರೆಸಿಡೆನ್ಸಿಯಲ್‌ ವಿಭಾಗದ ಸಿಇಒ ರಾಘವೇಂದ್ರ ಜೋಷಿ.

‘ಅನೇಕ ಪ್ರಾಪರ್ಟಿ ಡೆವಲಪರ್‌ಗಳು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ವಿನಾಯಿತಿ ಘೋಷಣೆ ಮಾಡುವ ಮೂಲಕ ಸಿದ್ಧ ಫ್ಲಾಟ್‌ಗಳ ಮಾರಾಟ ಹೆಚ್ಚಿಸಿಕೊಳ್ಳುವ ಯೋಚನೆ ಮಾಡಿದ್ದಾರೆ. ನಾವು ಕೈಗೆಟುವ ವಸತಿ ವಿಭಾಗದಲ್ಲಿ ಶೇ 5ರಷ್ಟು ವಿನಾಯಿತಿ ಘೋಷಿಸಿದ್ದೇವೆ. ರದ್ಧತಿ ಶುಲ್ಕವನ್ನು ಕಂಪನಿ ಮನ್ನಾ ಮಾಡಿದೆ. ಪ್ರೈಮ್ ಸ್ಥಳದ ಪ್ರಾಪರ್ಟಿಗೆ ಶೇ 3ರಷ್ಟು ವಿನಾಯಿತಿ ನೀಡಿದ್ದೇವೆ. ಬಡ್ಡಿದರಗಳು ಕಡಿಮೆಯಾಗುತ್ತಿದ್ದು, ಬಿಲ್ಡರ್‌ಗಳು ವಿನಾಯಿತಿ ಘೋಷಿಸುತ್ತಿರುವ ಕಾರಣ ಆಸ್ತಿ ಖರೀದಿಗೆ ಇದು ಉತ್ತಮ ಕಾಲ’ ಎನ್ನುವುದು ಭದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ಮಾಪಕ ಸರ್ವೇಶ ಎಸ್‌.ಬಿ. ಅವರ ಮಾತು.

ರಿಯಲ್ ಎಸ್ಟೇಟ್ ಸಂಸ್ಥೆಯಾದ ಹೌಸ್ ಆಫ್ ಹೀರಾನಂದಾನಿ ಬೆಂಗಳೂರಿನಲ್ಲಿನ ತನ್ನ ಆಸ್ತಿಗಳನ್ನು ಬಾಡಿಗೆಗೆ ನೀಡುವುದಾಗಿ ತಿಳಿಸಿದೆ. ಅಲ್ಲದೇ ಅದಕ್ಕಾಗಿ ಬಾಡಿಗೆದಾರರನ್ನು ಉತ್ತೇಜಿಸುವ ‘ಹೋಮ್ಸ್ ದಟ್ ಅರ್ನ್’ ಅಭಿಯಾನವನ್ನು ಆರಂಭಿಸಿದೆ. ಶೇ 3 ರಷ್ಟು ವಿನಾಯಿತಿ ನೀಡುವುದಾಗಿ ತಿಳಿಸಿದೆ. ಪ್ರಶಿನ್ ಝೋಬಲಿಯಾ, ವಿಪಿ ಮಾರ್ಕೆಟಿಂಗ್‌ ಸ್ಟ್ರಾಟಜಿ– ಈ ಯೋಜನೆಯಡಿ ಬಾಡಿಗೆದಾರರನ್ನು ಪಡೆಯಲು ಖರೀದಿದಾರರಿಗೆ ಕಂಪನಿ ಸಹಾಯ ಮಾಡುತ್ತದೆ ಎಂದು ಹೀರಾನಂದಾನಿ ಸಂಸ್ಥೆ ತಿಳಿಸಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಕಡಿಮೆ ಮಾಡುವುದು ಡೆವಲಪರ್‌ಗಳಿಗೆ ನಿಜಕ್ಕೂ ಕಷ್ಟದ ಕೆಲಸ. ನಿರ್ಮಾಣದ ಹಂತದ ವೆಚ್ಚಗಳ ಮೌಲ್ಯ ಹೆಚ್ಚಾಗಿದೆ. ಆದರೆ ಸದ್ಯ ತಮ್ಮ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಬಿಲ್ಡರ್‌‌ಗಳು ವಿನಾಯಿತಿ ನೀಡುತ್ತಿದ್ದಾರೆ. ಹೊಸ ಖರೀದಿದಾರನ್ನು ಆಕರ್ಷಿಸುವ ಮಾರ್ಗ ಇದು’ ಎಂದಿದ್ದಾರೆ ವೆಸ್ಟಿಯನ್ ಗ್ಲೋಬಲ್ ವರ್ಕ್ ಪ್ಲೇಸ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಶ್ರೀನಿವಾಸ ರಾವ್‌.

ಕೆಲವು ಬಿಲ್ಡರ್‌‌ಗಳು ಬೆಲೆ ಸುರಕ್ಷತಾ ಯೋಜನೆಗಳನ್ನು ಘೋಷಿಸಿದ್ದಾರೆ. ಕೊಂಡ ಫ್ಲಾಟ್‌ನ ಬೆಲೆ ಮುಂದಿನ ದಿನಗಳಲ್ಲಿ ಕಡಿಮೆಯಾದರೆ ಅಥವಾ ಅದೇ ಜಾಗಕ್ಕೆ ಮುಂದಿನ ದಿನಗಳಲ್ಲಿ ಕಂಪನಿಗಳು ಕಡಿಮೆ ಮೊತ್ತದ ಕೊಟೇಶನ್ ನೀಡಿದರೆ ವ್ಯತ್ಯಾಸದ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವ ಭರವಸೆ ನೀಡುತ್ತಿದ್ದಾರೆ.

‘ಒಂದು ವೇಳೆ ಕೋವಿಡ್ 19 ಕಾರಣದಿಂದ ಮುಂದಿನ ದಿನಗಳಲ್ಲಿ ಬೆಲೆ ಕುಸಿತವಾದರೂ ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ಅವರ ಬಾಕಿ ಹಣ ಅವರನ್ನು ತಲುಪುತ್ತದೆ’ ಎಂಬ ಭರವಸೆಯನ್ನು ಬಿಲ್ಡರ್‌‌ಗಳು ನೀಡಿದ್ದಾರೆ ಎಂದಿದ್ದಾರೆ ಶ್ರೀನಿವಾಸ್‌.

(ಅನುವಾದ: ರೇಷ್ಮಾ ಶೆಟ್ಟಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು