ಕೋಲಾರ: ಕಡಿಮೆ ಉತ್ಪಾದನೆ ಜೊತೆಗೆ ಹೊರರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿರುವ ಕಾರಣ ಜಿಲ್ಲೆಯಲ್ಲಿ ಟೊಮೆಟೊ ಧಾರಣೆ ಕುಸಿದಿದೆ. ಹೀಗಾಗಿ, ಟೊಮೆಟೊ ಬೆಳೆದ ರೈತರು ತೊಂದರೆಗೆ ಸಿಲುಕಿದ್ದಾರೆ.
ಉತ್ತಮ ಗುಣಮಟ್ಟದಿಂದ ಕೂಡಿದ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊಗೆ ನಗರದ ಎಪಿಎಂಸಿ ಮಾರುಕಟ್ಟೆಯ ಹರಾಜಿನಲ್ಲಿ ಗರಿಷ್ಠ ₹ 120 ಸಿಗುತ್ತಿದೆ. ಗುಣಮಟ್ಟವಿಲ್ಲದ ಬಾಕ್ಸ್ ಟೊಮೆಟೊ ₹50ಕ್ಕೆ ಬಿಕರಿಯಾಗುತ್ತಿದೆ. ಹೂಡಿದ ಬಂಡವಾಳವೂ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹10 ಕ್ಕೆ ಮಾರಾಟವಾಗುತ್ತಿದ್ದು, ಗ್ರಾಹಕರು ಖುಷಿಯಲ್ಲಿದ್ದಾರೆ.
ಟೊಮೆಟೊ ಮಾರಾಟದಲ್ಲಿ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎನಿಸಿರುವ ನಗರದ ಎಪಿಎಂಸಿಯಲ್ಲಿ ಬುಧವಾರ ಆವಕ ಪ್ರಮಾಣ 4,518 ಕ್ವಿಂಟಲ್ ಟೊಮೆಟೊ ಇತ್ತು.
ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹೆಚ್ಚು ಟೊಮೆಟೊ ಬೆಳೆದಿರುವುದರಿಂದ ಅಲ್ಲಿನ ವರ್ತಕರು ಇತ್ತ ಸುಳಿಯುತ್ತಿಲ್ಲ. ಅಲ್ಲಿನ ಮಾರುಕಟ್ಟೆಗಳಲ್ಲೇ ಟೊಮೆಟೊ ಸಂಗ್ರಹವಿದೆ.
‘ಜಿಲ್ಲೆಯಲ್ಲಿ ಸದ್ಯ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಪೂರೈಕೆಯೂ ತಗ್ಗಿದೆ. ಹೊರ ರಾಜ್ಯಗಳಿಂದ ಬೇಡಿಕೆಯೂ ಬರುತ್ತಿಲ್ಲ. ಅಂತರರಾಜ್ಯ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ, ಬೆಲೆ ತಗ್ಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ’ಪ್ರಜಾವಾಣಿ’ಗೆ ತಿಳಿಸಿದರು.
ವಾರದ ಹಿಂದೆ ಅಕಾಲಿಕ ಮಳೆ, ಬಿರುಗಾಳಿ, ಆಲಿಕಲ್ಲು ಕಾರಣ ಜಿಲ್ಲೆಯಲ್ಲಿ 200 ಹೆಕ್ಟೇರ್‌ಗೂ ಅಧಿಕ ಟೊಮೆಟೊ ಬೆಳೆ ನಾಶವಾಗಿದೆ. ಜೊತೆಗೆ ಗುಣಮಟ್ಟವೂ ತಗ್ಗಿದೆ. ಕೆಲವರು ಟೊಮೆಟೊ ಬದಲು ಆಲೂಗಡ್ಡೆ ಬೆಳೆದಿದ್ದಾರೆ.
‘ಇದು ಟೊಮೆಟೊ ಋತು ಅಲ್ಲ. ಏಪ್ರಿಲ್‌ನಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಮೇ, ಜೂನ್ ಬಳಿಕವಷ್ಟೇ ಟೊಮೆಟೊಗೆ ಮಾರುಕಟ್ಟೆ ಕುದುರಲಿದೆ’ ಎಂದರು.
ಹೈನುಗಾರಿಕೆಗೆ ಮೊರೆ: ‘ಎರಡು ಎಕರೆಯಲ್ಲಿ ಟೊಮೆಟೊ ಬೆಳೆದು ಎರಡು ವರ್ಷಗಳಲ್ಲಿ ₹ 10 ಲಕ್ಷ ನಷ್ಟವಾಯಿತು. ಹೀಗಾಗಿ, ಟೊಮೆಟೊ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿದ್ದೇನೆ. ಜಿಲ್ಲೆಯಲ್ಲಿ ಟೊಮೆಟೊಗೆ ರೋಗ ಹೆಚ್ಚುತ್ತಿದೆ, ಅಕಾಲಿಕ ಮಳೆ, ಬಿಸಿಲು ಹೆಚ್ಚಿದ್ದು, ಸರಿಯಾಗಿ ಬೆಲೆ ಸಿಗುತ್ತಿಲ್ಲ’ ಎಂದು ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ಮುರಳಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.