ಶುಕ್ರವಾರ, ಏಪ್ರಿಲ್ 3, 2020
19 °C
ರೇರಾ ನಿಯಮ ಉಲ್ಲಂಘಿಸಿದ ಬಿಎಚ್‌ಇಎಲ್‌ ರೆಮ್ಕೊ ಹೌಸಿಂಗ್‌ ಸೊಸೈಟಿ?

ಚುನಾವಣೆ ನೆರಳಲ್ಲಿ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಚ್‌ಇಎಲ್‌ (ರೆಮ್ಕೊ) ಎಂಪ್ಲಾಯಿಸ್‌ ಹೌಸ್‌ ಬಿಲ್ಡಿಂಗ್‌ ಕೊ– ಆಪರೇಟಿವ್‌ ಸೊಸೈಟಿಯು ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ (ರೇರಾ) ನಿಯಮಗಳನ್ನು ಉಲ್ಲಂಘಿಸಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದೆ. ಅಲ್ಲದೆ, ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸೊಸೈಟಿ ಸದಸ್ಯರೇ ಆರೋಪಿಸಿದ್ದಾರೆ.

ಆದರೆ, ಸೊಸೈಟಿ ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿಜಯ್‌ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ನಿಯಮ ಉಲ್ಲಂಘನೆ: ‘ಯಾವುದೇ ಹೌಸಿಂಗ್ ಸೊಸೈಟಿಯು ಬಡಾವಣೆ ಅಭಿವೃದ್ಧಿ ಪಡಿಸುವಾಗ ರೇರಾದಲ್ಲಿ ನೋಂದಣಿ ಮಾಡಿಸಬೇಕು. ಎಲ್ಲದಕ್ಕೂ ಪರವಾನಗಿ ಪಡೆಯಬೇಕು. ಆದರೆ, ಬಿಎಚ್‌ಇಎಲ್ ರೆಮ್ಕೊ ಹೌಸಿಂಗ್ ಸೊಸೈಟಿಯು ಈ ಯಾವ ಪರವಾನಗಿ
ಯನ್ನೂ ಪಡೆಯದೆ, ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ’ ಎಂದು ಸೊಸೈಟಿ ಸದಸ್ಯ ಅಶೋಕ್‌ ಕುಳ್ಳಿ ಆರೋಪಿಸಿದ್ದಾರೆ.

‘ಸಂಘದ ಸದಸ್ಯರಲ್ಲದವರಿಗೂ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸೊಸೈಟಿಯ ಚಟುವಟಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಬಿಎಚ್‌ಇಎಲ್‌ ನೌಕರರೂ ಆಗಿರುವ ಅಶೋಕ್‌ ದೂರಿದರು.

‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟಣಗೆರೆಯಲ್ಲಿಯೂ ಇದೇ ಸೊಸೈಟಿ ಲೇಔಟ್‌ ಮಾಡಿದೆ. ಆದರೆ, ನನಗೆ ನಿವೇಶನ ನೀಡಿಲ್ಲ. ನಿವೇಶನ ನೀಡುವಂತೆ ಹೈಕೋರ್ಟ್‌ ಹೇಳಿದ್ದರೂ ಈವರೆಗೆ ನೀಡಿಲ್ಲ’ ಎಂದೂ ಅವರು ದೂರಿದರು. 

ಚುನಾವಣೆ ವೇಳೆ ಸಾಮಾನ್ಯ: ‌‘ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಅಭಿವೃದ್ಧಿಪಡಿಸಿರುವ ಲೇಔಟ್‌ ನಿರ್ಮಾಣ ಕಾರ್ಯ ಆರಂಭವಾಗಿದ್ದು 2004ರಲ್ಲಿ. 2006ರಲ್ಲಿ ಯೋಜನೆ ಮುಗಿದ ನಂತರ ಬಿಎಂಆರ್‌ಡಿಎದಿಂದ ಎಲ್ಲ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ ಶೇ 40ರಷ್ಟು ನಿವೇಶನಗಳನ್ನು ಸೊಸೈಟಿ ಸದಸ್ಯರಿಗೆ ಮಂಜೂರು ಮಾಡಲಾಗಿದೆ’ ಎಂದು ವಿಜಯ್‌ಕುಮಾರ್‌ ಹೇಳಿದರು. 

‘2016ರ ನಂತರ ರೇರಾ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಕೆಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ. ಸ್ಥಳೀಯ ಯೋಜನಾ ಪ್ರಾಧಿಕಾರ ರೂಪಿಸಿರುವ ನಿಯಮದ ಅನುಸಾರ ಸಿಎ ನಿವೇಶನಗಳು, ಉದ್ಯಾನ, ರಸ್ತೆಗಳನ್ನು ಒಳಗೊಂಡಂತೆ ಯಾವುದೇ ಬಡಾವಣೆಯನ್ನು ನಿರ್ಮಿಸಿದ್ದರೆ, ಅದು ರೇರಾ ಕಾಯ್ದೆಯಡಿ ಬರುವುದಿಲ್ಲ. ಈ ವಿನಾಯ್ತಿಯನ್ನೇ ನಾವು ಪ್ರಾಧಿಕಾರದಿಂದ ಕೇಳುತ್ತಿದ್ದೇವೆ. ಬುಧವಾರ ಈ ಕುರಿತು ರೇರಾ ವಿಚಾರಣೆ ನಡೆಸಲಿದ್ದು, ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ’ ಎಂದು ತಿಳಿಸಿದರು. 

‘ಭಾನುವಾರ (ಫೆ.23) ಸೊಸೈಟಿಯ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದೆ. ನಮ್ಮ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಚುನಾವಣೆ ವೇಳೆ ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದೂ ಅವರು ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು