ಶನಿವಾರ, ಅಕ್ಟೋಬರ್ 23, 2021
23 °C

ಅಗ್ನಿ ಸುರಕ್ಷತೆಗೆ ಧಕ್ಕೆ ತರುವ ರಚನೆ ತೆರವು ಮಾಡಿ: ಬಿಬಿಎಂಪಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಸಮುಚ್ಚಯಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ಬಳಿಕ ಬಾಲ್ಕನಿಯಲ್ಲಿ ಬದಲಾವಣೆಗಳನ್ನು ಮಾಡಬಾರದು ಎಂದು ಬಿಬಿಎಂಪಿಯು ಬುಧವಾರ ಸುತ್ತೋಲೆ ಹೊರಡಿಸಿದೆ.

ದೇವರ ಚಿಕ್ಕನಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟ ಮರು ದಿನ ಹೊರಡಿಸಿರುವ ಈ ಸುತ್ತೋಲೆಯಲ್ಲಿ ಬಿಬಿಎಂಪಿಯು, ‘ಕಟ್ಟಡಗಳ ಸುರಕ್ಷತೆಗೆ ಸಂಬಂಧಿಸಿ ನಿಯಮ ಉಲ್ಲಂಘನೆಗೆ ಅವಕಾಶ ಕಲ್ಪಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಬೈಲಾ - 2003, ಪರಿಷ್ಕೃತ ವಲಯ ನಿಯಮಾವಳಿಗಳು -2015 ಮತ್ತು ಭಾರತದ ರಾಷ್ಟ್ರೀಯ ಕಟ್ಟಡ ಸಂಹಿತೆ - 2016ರ ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚುವಂತಿಲ್ಲ. ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡದ ರಚನೆಯನ್ನು ಮಾರ್ಪಾಡು ಮಾಡಲು ಅವಕಾಶವಿಲ್ಲ ಎಂದು ಬಿಬಿಎಂ‍ಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೂ ಕೆಲವು ಕಟ್ಟಡ ಮಾಲೀಕರು ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಿಯಮಾನುಸಾರ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಸತಿ ಸಮುಚ್ಚಯಗಳಲ್ಲಿ ಹಾಗೂ ಇತರೆ ಕಟ್ಟಡಗಳ ಬಾಲ್ಕನಿಯಲ್ಲಿ ಬದಲಾವಣೆ ಮಾಡುವುದನ್ನು ತಡೆಗಟ್ಟಬೇಕು ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಒಂದು ವೇಳೆ, ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ಬಳಿಕ ವಸತಿ ಸಮುಚ್ಚಯಗಳಲ್ಲಿ ಹಾಗೂ ಇತರ ಕಟ್ಟಡಗಳಲ್ಲಿ ಮಾರ್ಪಾಡು ಮಾಡುವ ಅವಶ್ಯವಿದ್ದಲ್ಲಿ ಪಾಲಿಕೆಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಮುಖ್ಯ ಆಯುಕ್ತರು ಸ್ಪಷ್ಟಸಿದ್ದಾರೆ.

‘ಕಟ್ಟಡಗಳ ಬಾಲ್ಕನಿಯಲ್ಲಿ ಗರಿಷ್ಠ 3.5 ಅಡಿಗಳಷ್ಟು ಎತ್ತರದ ಗ್ರಿಲ್‌ಗಳನ್ನು ಅಳವಡಿಸುವುದಕ್ಕೆ ಮಾತ್ರ ಅವಕಾಶ ಇದೆ. ಆದರೆ, ನಗರದ ಬಹುತೇಕ ವಸತಿ ಸಮುಚ್ಚಯಗಳು ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ಬಳಿಕ ಬಾಲ್ಕಿನಿಗಳನ್ನು ಪೂರ್ತಿ ಮುಚ್ಚುವ ರೀತಿ ಕಬ್ಬಿಣದ ಗ್ರಿಲ್‌ ಅಳವಡಿಸಿರುತ್ತವೆ. ಕೆಲವರು ಮಕ್ಕಳು ಕೆಳಗೆ ಬೀಳುವುದನ್ನು ತಪ್ಪಿಸಲು ಈ ರೀತಿ ಮಾಡುತ್ತಾರೆ. ಇನ್ನು ಕೆಲವರು ಕಳ್ಳರು ಮನೆಗೆ ನುಗ್ಗ ಬಹುದು ಎಂಬ ಆತಂಕದಿಂದ ಈ ರೀತಿ ಮಾರ್ಪಾಡು ಮಾಡುತ್ತಾರೆ’ ಎಂದು ಪಾಲಿಕೆಯ ನಗರ ಯೋಜನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಫ್ಲ್ಯಾಟ್‌ಗಳ ಬಾಲ್ಕನಿಗಳನ್ನು ಪೂರ್ತಿ ಮುಚ್ಚುವುದರಿಂದ ಯಾವ ರೀತಿ ಅಪಾಯ ಸಂಭವಿಸಬಹುದು ಎಂಬುದನ್ನು ದೇವರಚಿಕ್ಕನಹಳ್ಳಿಯ ಅಗ್ನಿ ದುರಂತ ತೋರಿಸಿಕೊಟ್ಟಿದೆ. ಬಾಲ್ಕನಿಗಳನ್ನು ಪೂರ್ತಿ ಮುಚ್ಚುವ ರೀತಿ ಗ್ರಿಲ್‌ಗಳನ್ನು ಅಳವಡಿಸಿದವರು, ತಾವಾಗಿಯೇ ಅದನ್ನು ತೆರವುಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಒ.ಸಿ ನೀಡಿದ ಬಳಿಕ ತಪಾಸಣೆ ಇಲ್ಲ’
‘ಸ್ವಾಧೀನಾನುಭವಪತ್ರ (ಒ.ಸಿ) ನೀಡುವ ಮುನ್ನ ನಗರ ಯೋಜನೆ ವಿಭಾಗದ ಅಧಿಕಾರಿಗಳು ಕಟ್ಟಡವನ್ನು ಪರಿಶೀಲನೆ ನಡೆಸಬೇಕು. ಒಮ್ಮೆ ಒ.ಸಿ. ನೀಡಿದ ಬಳಿಕ ಕಟ್ಟಡವನ್ನು ಪರಿಶೀಲನೆ ನಡೆಸುವ ಪರಿಪಾಠ ಇಲ್ಲ. ಕಟ್ಟಡದಲ್ಲಿ ಅಕ್ರಮವಾಗಿ ಮಾರ್ಪಾಡು ಮಾಡಿದ ಬಗ್ಗೆ ಯಾರಾದರೂ ದೂರು ನೀಡಿದರೆ ಮಾತ್ರ ಪರಿಶೀಲನೆ ನಡೆಸಲಾಗುತ್ತದೆ. ಒ.ಸಿ ಪಡೆದ ಬಳಿಕ ಅಧಿಕಾರಿಗಳು ಕಟ್ಟಡವನ್ನು ಪರಿಶೀಲನೆ ನಡೆಸುವುದಿಲ್ಲ ಎಂಬ ಕಾರಣಕ್ಕೆ ಅನೇಕರು ಪಾಲಿಕೆಯ ಗಮನಕ್ಕೇ ತಾರದೆಯೇ ಕಟ್ಟಡದ ರಚನೆಯಲ್ಲಿ ಮಾರ್ಪಾಡು ಮಾಡುತ್ತಾರೆ. ಇಂತಹ ಉಲ್ಲಂಘನೆಗಳಿಗೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಬಿಬಿಎಂಪಿಯ ನಗರ ಯೋಜನೆ ವಿಭಾಗದ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು