ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆಯ ‘ದರ್ಶನ’..! ಚಾರ್ಜ್‌ಶೀಟ್‌ನಲ್ಲಿ ಏನಿದೆ?

ದೋಷಾರೋಪ ಪಟ್ಟಿ ಸಲ್ಲಿಕೆ *ಪವಿತ್ರಾಗೌಡ ಎ.1– ನಟ ದರ್ಶನ್ ಎ.2
Published 5 ಸೆಪ್ಟೆಂಬರ್ 2024, 0:20 IST
Last Updated 5 ಸೆಪ್ಟೆಂಬರ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ 13 ಮಂದಿ ನೇರವಾಗಿ ಭಾಗಿ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ’ ಎಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರ ಬೆಳಿಗ್ಗೆ ಪೊಲೀಸ್‌ ಭದ್ರತೆಯಲ್ಲಿ ದೋಷಾರೋಪ ಪಟ್ಟಿಯನ್ನು ತಂದ ತನಿಖಾಧಿಕಾರಿ ಎಸಿಪಿ ಎನ್‌.ಚಂದನ್‌ ಕುಮಾರ್‌ ಅವರು ನ್ಯಾಯಾಧೀಶರಿಗೆ ಸಲ್ಲಿಸಿದರು.

ಪ್ರಕರಣದ 17 ಆರೋಪಿಗಳು ವಿವಿಧ ಹಂತದಲ್ಲಿ ಕೊಲೆಗೆ ಸಂಚು, ಅಪಹರಣ, ಹಲ್ಲೆ, ಕೊಲೆ, ಸಾಕ್ಷ್ಯನಾಶ, ಪ್ರಕರಣ ಮುಚ್ಚಿ ಹಾಕುವುದಕ್ಕೆ ಹಣಕಾಸು ವ್ಯವಹಾರ ಮತ್ತು ಮೃತದೇಹ ವಿಲೇವಾರಿಗೆ ಪ್ರಯತ್ನಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಈ ಪ್ರಕರಣದಲ್ಲಿ ರಾಘವೇಂದ್ರ, ಕೇಶವಮೂರ್ತಿ, ನಿಖಿಲ್‌ಕುಮಾರ್, ಕಾರ್ತಿಕ್‌  ಶರಣಾಗಿದ್ದರು. ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್ ಮತ್ತವರ ತಂಡವು, ಹಣದ ಆಮಿಷವೊಡ್ಡಿ ಈ ನಾಲ್ವರನ್ನು ಪೊಲೀಸರ ಮುಂದೆ ಶರಣಾಗುವಂತೆ ಮಾಡಿತ್ತು ಎಂಬುದೂ ದೋಷಾರೋಪ ಪಟ್ಟಿಯಲ್ಲಿದೆ.

ಜೂನ್‌ 9ರಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್‌ ಎನ್‌.ಸತೀಶ್‌ಕುಮಾರ್‌, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ನಡೆದಿತ್ತು. ಚಂದನ್‌ ಕುಮಾರ್ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡವು 85 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ, ಮೊದಲ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

‘ಮೊದಲ ಆರೋಪಿಯಾಗಿ ಪವಿತ್ರಾಗೌಡ, ಎರಡನೇ ಆರೋಪಿಯಾಗಿ ನಟ ದರ್ಶನ್‌ ತೂಗುದೀಪ್‌, ಮೂರನೇ ಆರೋಪಿಯಾಗಿ ಪವಿತ್ರಾಗೌಡ ಅವರ ವ್ಯವಸ್ಥಾಪಕ ಕೆ.ಪವನ್‌, ನಾಲ್ಕನೇ ಆರೋಪಿಯಾಗಿ ರೇಣುಕಸ್ವಾಮಿ ಅಪಹರಣದ ನೇತೃತ್ವ ವಹಿಸಿದ್ದ ದರ್ಶನ್‌ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ, 10ನೇ ಆರೋಪಿಯಾಗಿ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನ ಮಾಲೀಕ ವಿ.ವಿನಯ್‌ ಹಾಗೂ 11ನೇ ಆರೋಪಿಯಾಗಿ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರನ್ನು ಹೆಸರಿಸಲಾಗಿದೆ. ಪವಿತ್ರಾಗೌಡ ರೂಪಿಸಿದ ಸಂಚಿನಿಂದಲೇ ಇತರರು ಸೇರಿಕೊಂಡು ಕೊಲೆಯ ಕೃತ್ಯ ಎಸಗಿರುವುದು ಸಾಬೀತಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳು, ಮರಣೋತ್ತರ ವರದಿ ಸೇರಿ ಹಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದ ತನಿಖಾಧಿಕಾರಿಗಳು, 3,991 ಪುಟಗಳ ಸುದೀರ್ಘವಾದ ಆರೋಪ ಪಟ್ಟಿಯನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 173(8)ರ ಅಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ತಾಂತ್ರಿಕ ಸಾಕ್ಷ್ಯವೇ ಪ್ರಧಾನ

ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯನಾಶ), 120 (ಬಿ) (ಕ್ರಿಮಿನಲ್‌ ಒಳಸಂಚು), 364 (ಕೊಲೆ ಉದ್ದೇಶದಿಂದ ಅಪಹರಣ), 355 (ಅಮಾನುಷ ಹಲ್ಲೆ), 384 (ಸುಲಿಗೆ ಕೃತ್ಯ ಮಾಡಿದ್ದಕ್ಕೆ ದಂಡನೆ), 143 (ಕಾನೂನು ಬಾಹಿರವಾಗಿ ಗುಂಪುಗೂಡುವಿಕೆ), 147 (ದೊಂಬಿ), 148 (ಮಾರಕ ಆಯುಧ ಹಿಡಿದು ಗಲಾಟೆ) ಅಡಿ ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು. ಎಲ್ಲ ಆರೋಪಗಳೂ ಸಾಬೀತಾಗಿವೆ ಎಂದು ಆರೋಪಪಟ್ಟಿಯಲ್ಲಿ ತನಿಖಾ ತಂಡ ತಿಳಿಸಿದೆ.

ಪ್ರಧಾನ ಸಾಕ್ಷ್ಯಗಳಾಗಲಿವೆ

‘ಕೃತ್ಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕಿದ್ದರು. ಮುಂದಿನ ವಿಚಾರಣೆ ಪ್ರಕ್ರಿಯೆಗಳು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ನಡೆಯಲಿವೆ. ಐಪಿಸಿ ಸೆಕ್ಷನ್‌ಗಳ ಅಡಿ ತಾಂತ್ರಿಕ ಸಾಕ್ಷ್ಯಾಧಾರಗಳು ಪ್ರಾಥಮಿಕ ಸಾಕ್ಷ್ಯಗಳು ಆಗುತ್ತಿದ್ದವು. ಬಿಎನ್‌ಎಸ್‌ ಜಾರಿಯಾದ ಬಳಿಕ ತಾಂತ್ರಿಕ ಸಾಕ್ಷ್ಯಾಧಾರಗಳು ಪ್ರಧಾನ ಸಾಕ್ಷ್ಯಗಳಾಗಲಿವೆ’ ಎಂದು ಮೂಲಗಳು ಹೇಳಿವೆ.

‘ತ್ವರಿತ ನ್ಯಾಯಾಲಯಕ್ಕೆ ಮನವಿ’

‘ಪ್ರಕರಣದ ವಿಚಾರಣೆಗೆ ತ್ವರಿತ ಅಥವಾ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಚಿಂತನೆ ನಡೆದಿದೆ. ಕಾನೂನು ತಜ್ಞರ ಜತೆಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಹೇಳಿದರು. ‘ಪ್ರಕರಣದ ತನಿಖೆ ಪೂರ್ಣವಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನೂ ಕಲೆಹಾಕಿಯೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ಸಂಪೂರ್ಣ ವರದಿಗಳು ಬಂದಿವೆ. ಆದರೆ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಸಿಎಫ್‌ಎಸ್‌ಎಲ್‌) ಕೆಲವು ವರದಿಗಳು ಬರುವುದು ಬಾಕಿ ಇದೆ. ಅಲ್ಲಿಗೆ ಕೆಲವು ತಾಂತ್ರಿಕ ಉಪಕರಣಗಳನ್ನು ಕಳುಹಿಸಲಾಗಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT