ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಸಂಪುಟಗಳ ಮರು ಮುದ್ರಣ

ಪ್ರಕ್ರಿಯೆ ಆರಂಭಿಸಲು ಸಚಿವ ಸಿ.ಟಿ. ರವಿ ಸೂಚನೆ
Last Updated 3 ನವೆಂಬರ್ 2020, 3:18 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬರಹ, ಭಾಷಣ ಮತ್ತು ಸಂವಿಧಾನ ರಚನಾ ಸಮಿತಿಯ ನಡಾವಳಿಗಳನ್ನು ಒಳಗೊಂಡಿರುವ 22 ಸಂಪುಟಗಳ ಮರು ಮುದ್ರಣವನ್ನು ತಕ್ಷಣವೇ ಆರಂಭಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ವಿಧಾನಸೌಧದಲ್ಲಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಅಂಬೇಡ್ಕರ್‌ ಅವರ ಬರಹ ಮತ್ತು ಭಾಷಣಗಳ ಸಂಪುಟಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರತಿ ಸಂಪುಟವೂ 1,000 ಪುಟಗಳಷ್ಟಿದೆ. ಶೀಘ್ರದಲ್ಲಿ ಮುದ್ರಿಸಿ, ಓದುಗರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಚಿತ್ರಕಲಾ ಪರಿಷತ್‌ ಆರಂಭಿಸಿರುವ ಸಾಂಪ್ರದಾಯಿಕ ಗುರುಕುಲ ಮಾದರಿಯ ಶಾಲೆಗೆ ಶೈಕ್ಷಣಿಕ ಮಾನ್ಯತೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವರ ಜತೆ ಚರ್ಚಿಸುವುದಾಗಿ ರವಿ ಭರವಸೆ ನೀಡಿದರು. ಕೊಡವ ಭಾಷಾ ಶಿಕ್ಷಣಕ್ಕೆ ಮಾನ್ಯತೆ ನೀಡಬೇಕೆಂಬ ಕೊಡವ ಅಕಾಡೆಮಿ ಅಧ್ಯಕ್ಷರ ಬೇಡಿಕೆಯನ್ನೂ ಬೆಂಬಲಿಸುವುದಾಗಿ ತಿಳಿಸಿದರು.

ಅನುದಾನ ಬಳಕೆಗೆ ತಾಕೀತು:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಲವು ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಒದಗಿಸಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎರಡು ತಿಂಗಳೊಳಗೆ ಸಂಪೂರ್ಣ ಬಳಕೆ ಮಾಡುವಂತೆ ತಾಕೀತು ಮಾಡಿದರು.

‘ಮುಂದಿನ ಸಭೆಯ ವೇಳೆಗೆ ಶೇ 100 ರಷ್ಟು ಪ್ರಗತಿ ಸಾಧಿಸಲೇಬೇಕು. ಯಾವುದೇ ಕಾರಣ ನೀಡಲು ಅವಕಾಶವಿಲ್ಲ. ಅನುದಾನ ಬಳಕೆಯಾಗದೆ ಇದ್ದರೆ ಅಥವಾ ಪ್ರಗತಿ ಸಾಧಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT