ಸೋಮವಾರ, ಫೆಬ್ರವರಿ 17, 2020
15 °C

ಜೀತ: 163 ಕಾರ್ಮಿಕರು, 41 ಮಕ್ಕಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಕೊಂಡಶೆಟ್ಟಿಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಒಡಿಶಾದ 41 ಮಕ್ಕಳು ಮತ್ತು 163 ಕಾರ್ಮಿಕರನ್ನು ಜಿಲ್ಲಾ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ರಕ್ಷಿಸಿದ್ದಾರೆ.

ಸ್ವಯಂಸೇವಾ ಸಂಸ್ಥೆಯೊಂದು ನೀಡಿದ ದೂರಿನ್ವಯ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಮಿಕರನ್ನು ಬಿಡುಗಡೆಗೊಳಿಸಿತು.

‘ಕೊಂಡಶೆಟ್ಟಿಹಳ್ಳಿ ಗ್ರಾಮದಲ್ಲಿ ಯಲ್ಲಪ್ಪ, ಎನ್. ಶ್ರೀನಿವಾಸರೆಡ್ಡಿ ಅವರ 6 ಜಾಗವನ್ನು ದಾಸರಹಳ್ಳಿ ನಿವಾಸಿ ಪಿ.ವಿ.ಗಣೇಶಪ್ಪ ಎಂಬುವರು ಗುತ್ತಿಗೆ ಪಡೆದು ಇಟ್ಟಿಗೆ ತಯಾರಿಕಾ ಘಟಕ ನಡೆಸುತ್ತಿದ್ದರು. ಮುಂಗಡ ಹಣ ನೀಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಒಡಿಶಾ ರಾಜ್ಯದಿಂದ ಅಕ್ರಮವಾಗಿ ಕೂಲಿ ಕಾರ್ಮಿಕರನ್ನು ಕರೆತಂದಿದ್ದರು. ಅವರನ್ನು ನಿತ್ಯ ಸುಮಾರು 15 ಗಂಟೆಗಳ ಕಾಲ ದುಡಿಸಿ ಕೊಳ್ಳುತ್ತಿದ್ದರು’ ಎಂದು ಯಲಹಂಕ ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.

‘ದಿನದಲ್ಲಿ 15 ಗಂಟೆಗಳ ಕಾಲ ದುಡಿಸಿಕೊಂಡರೂ ದಿನಕ್ಕೆ ಕೇವಲ ₹100 ಸಂಬಳ ನೀಡುತ್ತಿದ್ದರು. ರಜೆ ನೀಡುತ್ತಿರಲಿಲ್ಲ. ಇಡೀ ಕುಟುಂಬ ದುಡಿದರೆ ಮಾತ್ರ ಸಂಬಳ. ಇಲ್ಲದಿದ್ದರೆ ಇಲ್ಲ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಅವರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ್‌  ತಿಳಿಸಿದರು.

ಪ್ರಕರಣ ದಾಖಲು: ಜಮೀನಿನ ಮಾಲೀಕ ಯಲ್ಲಪ್ಪ, ಇಟ್ಟಿಗೆ ತಯಾರಿಕಾ ಘಟಕದ ಮಾಲೀಕ ಗಣೇಶ್ ಮತ್ತು ಮೇಲ್ವಿಚಾರಕರಾದ ವೆಂಕಟೇಶ್, ದೇವರಾಜ್, ಬ್ರಹ್ಮಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

‘ಹೊಟ್ಟೆ ತುಂಬಾ ಊಟಕ್ಕೆ ಬಂದೀವಿ’

‘ದುಡ್ಡಿಗಿಂತ ಹೊಟ್ಟೆ ತುಂಬಾ ಊಟ ಮಾಡಲು ಇಲ್ಲಿಗೆ ಬಂದಿದ್ದೇವೆ. ನಾವು ಬರುವಾಗ ನಮ್ಮ ಅಧಾರ್ ಕಾರ್ಡ್‌ ಅನ್ನು ಏಜೆನ್ಸಿಯವರು ಪಡೆದುಕೊಂಡಿದ್ದು, ಅದನ್ನು ಅವರ ಬಳಿಯೇ ಇಟ್ಟು ಕೊಂಡಿದ್ದಾರೆ’ ಎಂದು ಕೆಲಸದಿಂದ ಬಿಡುಗಡೆ ಹೊಂದಿದ ಕಾರ್ಮಿಕ ಮಹಿಳೆ ಮೋತಿ ಬಿಹ್ಹಿ ಹೇಳಿದರು.

‘ಮೂರು ತಿಂಗಳು ಮಾತ್ರ ಒಂದು ಕಡೆ ಕೆಲಸ ಮಾಡಲು ಬಿಡುತ್ತಾರೆ. ನಂತರ ಬೇರೆ ಕಡೆ ಕರೆದುಕೊಂಡು ಹೋಗುತ್ತಾರೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿಗೆ ಹೋಗುತ್ತೇವೆ. ನಮಗೆ ದುಡ್ಡಿಗಿಂತ ಹೊಟ್ಟೆ ತುಂಬಾ ಊಟ ಮಾಡಲು ಬೇಕು’ ಎಂದು ತಿಳಿಸಿದರು.

‘ನನ್ನ ಅಪ್ಪ– ಅಮ್ಮ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕುಟುಂಬದ ಮೂರು ಜನ ದುಡಿದರೆ ದಿನಕ್ಕೆ ₹225 ಸಂಬಳ ನೀಡುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು