ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿದ ವಸತಿ ಸಮುಚ್ಚಯ; ಜನರ ಸ್ಥಳಾಂತರ

ಸ್ಥಳಕ್ಕೆ ಐಐಎಸ್ಸಿ ತಜ್ಞರ ಭೇಟಿ l ವರದಿ ಆಧರಿಸಿ ಮುಂದಿನ ಕ್ರಮ: ಅಧಿಕಾರಿಗಳ ಭರವಸೆ
Last Updated 18 ಅಕ್ಟೋಬರ್ 2021, 18:59 IST
ಅಕ್ಷರ ಗಾತ್ರ

ಬೆಂಗಳೂರು: ಆರು ಇಂಚುಗಳಷ್ಟು ವಾಲಿರುವ ಪೊಲೀಸ್ ವಸತಿ ಸಮುಚ್ಚಯದ ‘ಬಿ’ ಬ್ಲಾಕ್‌ನಲ್ಲಿದ್ದ 18 ಪೊಲೀಸ್ ಕುಟುಂಬಗಳು ತಮ್ಮ ಮನೆಗಳನ್ನು ಸೋಮವಾರ ತೆರವುಗೊಳಿಸಿವೆ.

ಪೊಲೀಸರು ಹಾಗೂ ಅವರ ಕುಟುಂಬದವರ ವಾಸಕ್ಕಾಗಿ ಬಿನ್ನಿ ಮಿಲ್ ಬಳಿ ಏಳು ಮಹಡಿ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಇದರ ‘ಬಿ’ ಬ್ಲಾಕ್‌ ಕಟ್ಟಡದ ಅರ್ಧ ಭಾಗ ಒಂದೂವರೆ ವರ್ಷದಿಂದ ನಿಧಾನವಾಗಿ ವಾಲುತ್ತಿದ್ದು, ಅಲ್ಲಲ್ಲಿ ಬಿರುಕುಗಳು ಬಿದ್ದಿವೆ.

ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ಕಟ್ಟಡವು ಪೂರ್ತಿಯಾಗಿ ವಾಲುವ ಆತಂಕ ನಿವಾಸಿಗಳಲ್ಲಿತ್ತು. ಹೀಗಾಗಿ, ಕಟ್ಟಡದ ಅರ್ಧ ಭಾಗದಲ್ಲಿರುವ 32 ಕುಟುಂಬಗಳ ತ್ವರಿತ ಸ್ಥಳಾಂತರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು.

‘ಪೊಲೀಸ್ ಕುಟುಂಬಗಳ ಸುರಕ್ಷತೆ ದೃಷ್ಟಿಯಿಂದ ವಸತಿ ಸಮುಚ್ಚಯದ ಮನೆಗಳನ್ನು ಖಾಲಿ ಮಾಡಿ. ಅನ್ನಪೂರ್ಣೇಶ್ವರಿನಗರದಲ್ಲಿರುವ ಸಮುಚ್ಚಯದ ಮನೆಗಳಿಗೆ ಸ್ಥಳಾಂತರಗೊಳ್ಳಬೇಕು’ ಎಂದು ಹಿರಿಯ ಅಧಿಕಾರಿಗಳು ಶನಿವಾರ (ಅ. 16) ರಾತ್ರಿಯೇ ಆದೇಶ ಹೊರಡಿಸಿದ್ದರು.

ಮಕ್ಕಳು, ವೃದ್ಧರ ಸಮೇತ ಹೊರಟರು: ಮನೆಯ ವಸ್ತುಗಳನ್ನು ಹೊಂದಿಸಿಕೊಂಡು ಮಕ್ಕಳು, ವೃದ್ಧರ ಸಮೇತವಾಗಿ ಕುಟುಂಬದವರು ಮನೆ ಖಾಲಿ ಮಾಡಿದರು.

‘ಒಂದೂವರೆ ವರ್ಷದ ಹಿಂದೆಯೇ ಮೂರು ಇಂಚುಗಳಷ್ಟು ಕಟ್ಟಡ ವಾಲಿತ್ತು. ಆದರೆ, ಯಾವುದೇ ಮನೆಗೂ ಧಕ್ಕೆ ಆಗಿರಲಿಲ್ಲ. ಆತಂಕವಿಲ್ಲದೇ ವಾಸವಿದ್ದೆವು. ಆದರೆ, ಇತ್ತೀಚೆಗೆ ಮಳೆ ಹೆಚ್ಚಾಗಿ ನಗರದಲ್ಲಿ ಅಲ್ಲಲ್ಲಿ ಕೆಲವು ಕಟ್ಟಡಗಳು ಕುಸಿದಿವೆ. ಹಾಗಾಗಿ ನಮ್ಮ ಕಟ್ಟಡವೂ ಕುಸಿಯುವ ಆತಂಕ ಶುರುವಾಗಿತ್ತು’ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.

‘ಹಿರಿಯ ಅಧಿಕಾರಿಗಳ ಸೂಚನೆಯಂತೆ ಮನೆ ಖಾಲಿ ಮಾಡಿ ಹೊಸ ಮನೆಗೆ ಹೊರಟಿದ್ದೇವೆ. ಹೊಸ ಮನೆಯಿಂದ ಕೆಲಸದ ಸ್ಥಳ ಹಾಗೂ ಮಕ್ಕಳ ಶಾಲೆಗೆ ಹೋಗಲು ದೂರವಾಗುತ್ತದೆ ಎಂಬ ಚಿಂತೆಯೂ ಇದೆ’ ಎಂದೂ ತಿಳಿಸಿದರು.

ಸಾಮಗ್ರಿ ಹೊಂದಿಸುತ್ತಿರುವ ಕುಟುಂಬಗಳು: ಮನೆ ಖಾಲಿ ಮಾಡುವ ನೋಟಿಸ್ ಪಡೆದಿರುವ 14 ಕುಟುಂಬಗಳು, ತಮ್ಮ ಸಾಮಗ್ರಿ ಹೊಂದಿಸುವ ಕೆಲಸದಲ್ಲಿ ನಿರತವಾಗಿವೆ.

ಕೆಲ ಮನೆಗಳಲ್ಲಿ ವೃದ್ಧರು, ಮಹಿಳೆಯರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಗರ್ಭಿಣಿಯರೂ ಇದ್ದಾರೆ. ಅದೇ ಕಾರಣ ನೀಡಿ ಕುಟುಂಬದವರು, ಮನೆಗಳ ಸ್ಥಳಾಂತರಕ್ಕೆ ಸಮಯ ಕೋರಿದ್ದಾರೆ.

ತಜ್ಞರ ಭೇಟಿ: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರ ತಂಡ ವಸತಿ ಸಮುಚ್ಚಯಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಟ್ಟಡದ ಒಂದು ಪಾರ್ಶ್ವದಲ್ಲಿದ್ದ ಬಿರುಕುಗಳನ್ನು ಪರಿಶೀಲಿಸಿದ ತಂಡ, ಅದರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಡೆಸಿತು. ಕಟ್ಟಡದ ಬಗ್ಗೆ ಅಧ್ಯಯನ ನಡೆಸಲಿರುವ ತಂಡ, ಸದೃಢತೆ ಬಗ್ಗೆ ವರದಿ ನೀಡಲಿದೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT