ಭಾನುವಾರ, ಆಗಸ್ಟ್ 14, 2022
26 °C

ಮೇಲ್ಸೇತುವೆಗೆ ಉದ್ಯಾನದ ಜಾಗ ಸ್ವಾಧೀನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಶಿವಾನಂದ ವೃತ್ತದ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಕುಮಾರ ಪಾರ್ಕ್‌ನ ಜಾಗವನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶೇಷಾದ್ರಿಪುರ ಸುತ್ತಮುತ್ತಲಿನ ನಿವಾಸಿಗಳು ದೂರಿದ್ದಾರೆ.

‘ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಆಗಲೇ ಹೈರಾಣಾಗಿದ್ದೇವೆ. ಆದರೆ, ಮೇಲ್ಸೇತುವೆ ನಿರ್ಮಾಣದ ನೆಪದಲ್ಲಿ ಕುಮಾರ ಪಾರ್ಕ್‌ನ ಜಾಗವನ್ನೂ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಯೋಜನೆಗಾಗಿ ಉದ್ಯಾನದ ಸ್ಥಳವನ್ನೂ ಸ್ವಾಧೀನಪಡಿಸಿಕೊಳ್ಳಬಹುದು’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಉದ್ಯಾನದ ಸುತ್ತ ಹಾಕಿದ್ದ ಮುಳ್ಳಿನ ತಂತಿಯನ್ನು ತೆಗೆದುಹಾಕಲಾಗಿದೆ. ಸುತ್ತ ಬೆಳೆದಿದ್ದ ಬಿದಿರನ್ನೂ ತೆಗೆದು ಹಾಕಲಾಗುತ್ತಿದೆ. ಉದ್ಯಾನದ ಸುತ್ತ ಇರುವ ಮರ–ಗಿಡಗಳನ್ನೂ ಕಡಿಯಲಾಗುತ್ತಿದೆ’ ಎಂದು ಸ್ಥಳೀಯರಾದ ಭಗವಾನ್‌ದಾಸ್‌ ರಾವ್‌ ಹೇಳಿದರು.

‘ಈ ಬಗ್ಗೆ ಸ್ಥಳೀಯರಿಗೆ ಮಾಹಿತಿಯನ್ನೇ ನೀಡಿಲ್ಲ. ಉದ್ಯಾನದ ಜಾಗವನ್ನು ಸ್ವಾಧೀನ ಪಡಿಸುವ ಬಗ್ಗೆಯೂ ಸಾರ್ವಜನಿಕವಾಗಿ ಮಾಹಿತಿ ನೀಡಿಲ್ಲ. ಈ ಉದ್ಯಾನಕ್ಕೆ ಹಲವರು ಬೆಳಿಗ್ಗೆ ವಾಯುವಿಹಾರಕ್ಕೆ ಬರುತ್ತಾರೆ. ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ’ ಎಂದರು.

‘ಈ ಮೇಲ್ಸೇತುವೆಗಾಗಿ ಈಗಾಗಲೇ ಹಲವಾರು ಮರಗಳನ್ನು ಕಳೆದುಕೊಂಡಿದ್ದೇವೆ. ಈಗ ಈ ಉದ್ಯಾನದ ಸ್ಥಳವನ್ನೂ ವಶಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ’ ಎಂದರು.

‘ತಂತಿ ಬೇಲಿಯನ್ನು ಎರಡರಿಂದ–ಮೂರು ಮೀಟರ್‌ನಷ್ಟು ಹಿಂದಕ್ಕೆ ಸರಿಸಲಾಗುತ್ತದೆಯಷ್ಟೇ. ಉದ್ಯಾನದೊಳಗೆ ಯಾವುದೇ ಬದಲಾವಣೆ ಮಾಡುವುದಿಲ್ಲ’ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಸೌಕರ್ಯ) ಎಂ. ಲೋಕೇಶ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

ಆದರೆ, ಇದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸಿದ ಬಿಬಿಎಂಪಿಯ ಕಿರಿಯ ಎಂಜಿನಿಯರ್‌ ಒಬ್ಬರು,  ‘ಮೇಲ್ಸೇತುವೆಯ ಯೋಜನೆ ಅಥವಾ ನಕ್ಷೆಗೆ ಅನುಗುಣವಾಗಿ ತಂತಿ ಬೇಲಿಯನ್ನು ಪುನರ್‌ ನಿರ್ಮಾಣ ಮಾಡಲಾಗುವುದು’ ಎಂದರು.

ಆಮೆಗತಿ: ಮೇಲ್ಸೇತುವೆ ನಿರ್ಮಾಣ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಹಲವು ಕಾರಣಗಳಿಂದ ಗಡುವು ಮುಂದೂಡುತ್ತಲೇ ಬಂದಿದೆ. ಕಳೆದ ವಾರ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಧಿಕಾರಿಗಳು ಒಂದೂವರೆ ತಿಂಗಳು ಸಮಯ ಕೇಳಿದ್ದು, ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು