ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹನೆ ಕಳೆದುಕೊಳ್ಳುತ್ತಿರುವ ಯುವಜನರು: ಡಿ.ವಿ. ಗುರುಪ್ರಸಾದ್

Published 10 ಮಾರ್ಚ್ 2024, 14:19 IST
Last Updated 10 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚೆಗೆ ಯುವಜನರು ಬದುಕಿನಲ್ಲಿ ಸೋಲು ಎದುರಾದ ತಕ್ಷಣ ಸಾವಿಗೆ ಶರಣಾಗುತ್ತಿದ್ದಾರೆ. ಸೋಲನ್ನು ಜಯಿಸುವ ಮನೋಭಾವವೇ ಇಲ್ಲವಾಗಿದೆ’ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ವಿ. ಗುರುಪ್ರಸಾದ್ ಬೇಸರ ವ್ಯಕ್ತಪಡಿಸಿದರು. 

ಸಮನ್ವಿತ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜೀವ್ ಎನ್. ಮಾಗಲ್ ಅವರು ಅನುವಾದಿಸಿರುವ ‘ಸೋಲಿಗೆ ಸೋಲದವನಿಗೆ ಸೋಲೇ ಇಲ್ಲ!’ (ನಿರಂಜನ್ ವಿ. ನೇರ್ಲಿಗೆ ಮೂಲ ಲೇಖಕ), ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಅನುವಾದಿಸಿರುವ ‘ಸಾಫ್ಟ್‌ವೇರ್‌ನಿಂದ ಸಾಕ್ಷಾತ್ಕಾರದೆಡೆಗೆ’ (ಓಂ ಸ್ವಾಮಿ ಮೂಲ ಲೇಖಕ) ಹಾಗೂ ಅಕ್ಷತಾ ರಾಧಾಕೃಷ್ಣ ಅವರು ಅನುವಾದಿಸಿರುವ ‘ಜಗದಗಲ’ (ಆಪ್ತಿ ಪಟವರ್ಧನ್) ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ಗೆಲ್ಲುವ ಧಾವಂತದಲ್ಲಿ ಯುವಜನರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿಗಳನ್ನು ಎದುರಿಸುವ ಮನೋಭಾವ ರೂಢಿಸಿಕೊಳ್ಳದೆ ಹೋದರೆ, ಬದುಕಿನ ವಾಸ್ತವಗಳನ್ನು ಎದುರಿಸುವುದು ಕಷ್ಟ. ಬದುಕಿನಲ್ಲಿ ಒಮ್ಮೆ ಫೇಲ್ ಆಗಬೇಕು. ಅಷ್ಟಕ್ಕೂ ಫೇಲ್ ಆದರೆ ಬದುಕು ಮುಗಿದು ಹೋಗುವುದಿಲ್ಲ. ಇದನ್ನು ಅರಿತು ಮುಂದೆ ಸಾಗಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಲೇಖಕ ನಿರಂಜನ್ ವಿ. ನೆರ್ಲಿಗೆ, ‘ಮನುಷ್ಯ ಸೋತು ಕುಸಿದಾಗಲೂ ಬದುಕಿನಲ್ಲಿ ಆಯ್ಕೆಗಳು ಇದ್ದೇ ಇರುತ್ತವೆ. ಸೋಲಿಗೆ ಸೋತು ಹಿಂದೆ ಹೆಜ್ಜೆ ಹಾಕದವರು ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ಬದುಕಿನ ಪ್ರತಿ ತಿರುವಿನಲ್ಲೂ ಹೊಸ ಸಾಧ್ಯತೆಗಳು ಇರುತ್ತವೆ. ಸವಾಲುಗಳನ್ನು ಎದುರಿಸಿ ಮುನ್ನಡೆದವರಿಗೆ ಮಾತ್ರ ಹೊಸ ಅವಕಾಶಗಳ ಬಾಗಿಲು ತೆರೆಯುತ್ತವೆ’ ಎಂದು ತಿಳಿಸಿದರು.

ಅನುವಾದಕ ಜಯಪ್ರಕಾಶ್ ನಾರಾಯಣ, ‘ಸತ್ಯ ಎಂಬುದು ಪ್ರತಿಯೊಬ್ಬರ ಅನುಭೂತಿಗೆ ದಕ್ಕುವ ದರ್ಶನ. ಇದನ್ನೇ ಓಂ ಸ್ವಾಮಿ ಅವರ ಜೀವನ ದರ್ಶನ ನಮಗೆ ತಿಳಿಸಿಕೊಡುತ್ತದೆ. ನಾವು ಬದುಕಿನಲ್ಲಿ ನಮ್ಮದೇ ಅನುಭವಗಳ ನೆಲೆಯಲ್ಲಿ ಸತ್ಯವನ್ನು ಕಂಡುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT