ಮಂಗಳವಾರ, ಜನವರಿ 19, 2021
26 °C

ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬುಧವಾರ ಏರ್ಪಡಿಸಲಾಗಿತ್ತು.

ಈ ಸಾಲಿನ ಪ್ರಶಸ್ತಿಯನ್ನು ನಟಿ ಸುಧಾರಾಣಿ, ಸುಂದರಂ ಆರ್ಕಿಟೆಕ್ಟ್ ಅಧ್ಯಕ್ಷ ಆರ್.ಸುಂದರಂ ಹಾಗೂ ಮಲೇಷ್ಯಾ ಸಭಾ ವಿಶ್ವವಿದ್ಯಾಲಯದ ಡಾ.ಪಿ.ವಿಶ್ವೇಶ್ವರರಾವ್ ಅವರಿಗೆ ನೀಡಲಾಯಿತು.

ಸುಧಾರಾಣಿ ಮಾತನಾಡಿ, ’ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಖುಷಿಯಾಗಿದ್ದು ಕನ್ನಡ ಚಿತ್ರರಂಗದಿಂದ ಮೊದಲ ಮಹಿಳೆ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಮತ್ತಷ್ಟು ಸಂತಸವಾಗಿದೆ. ರೇವಾ ಕಾಲೇಜಿನ ಆವರಣ ತುಂಬಾ ಸುಂದರವಾಗಿದ್ದು, ಅತ್ಯುತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು‘ ಎಂದು ತಿಳಿಸಿದರು.

’ಕನ್ನಡ ಭಾಷೆ ಎಂದಿಗೂ ಕಸ್ತೂರಿಯಿದ್ದಂತೆ. ಎಲ್ಲ ಭಾಷೆಗಳನ್ನು ಗೌರವಿಸಬೇಕು. ಆದರೆ, ನಮ್ಮತನವನ್ನು ಎಂದಿಗೂ ಬಿಟ್ಟುಕೊಡದೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಯಾರೊಂದಿಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳದೆ ನಿಮ್ಮ ಗುರಿ ಸಾಧನೆಯ ಕಡೆಗೆ ನಿಮ್ಮ ಪ್ರಯತ್ನ ಮುಂದುವರಿಸಬೇಕು‘ ಎಂದರು.

ವರ್ಚುಯಲ್ ಮೂಲಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪಿ.ವಿಶ್ವೇಶ್ವರರಾವ್, ’ರೇವಾ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಎಲ್ಲ ಆಯಾಮಗಳಿಂದಲೂ ವಿದ್ಯಾರ್ಥಿಗಳನ್ನು ತಯಾರು ಮಾಡಿ, ದೇಶದ ಸುಸ್ಥಿರ ಅಭಿವೃದ್ಧಿ ಕೊಡುಗೆ ನೀಡುತ್ತಿದೆ‘ ಎಂದು ತಿಳಿಸಿದರು. ಸುಂದರಂ ಅವರ ಪುತ್ರಿ ಶಾಲಿನಿ ಸುಂದರಂ ಪ್ರಶಸ್ತಿ ಸ್ವೀಕರಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ’ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮಾತ್ರವಲ್ಲದೆ ರೇವಾ ಕುಟುಂಬ ಸದಸ್ಯರ ಸಹಕಾರದೊಂದಿಗೆ ಕಠಿಣ ಪರಿಶ್ರಮ ಹಾಗೂ ಬದ್ಧತೆಯನ್ನು ಧ್ಯೇಯವಾಗಿಟ್ಟುಕೊಂಡು ಸಮಾಜದ ಒಳಿತಿಗಾಗಿ ಮತದಾನ ಜಾಗೃತಿಯಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಯಶಸ್ಸು ಸಾಧಿಸಲಾಗಿದೆ. ಮುಂದೆಯೂ ಸಹ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು‘ ಎಂದು ತಿಳಿಸಿದರು.

ಸಹ ಉಪಕುಲಪತಿ ಡಾ.ಎಂ.ಧನಂಜಯ, ಕುಲಸಚಿವೆ ಡಾ.ಬೀನಾ ಜಿ. ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು