ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ವ ಸಂಗ್ರಹದಲ್ಲಿ ಕುಸಿತ

ನಗರ ಜಿಲ್ಲಾ ವ್ಯಾಪ್ತಿಗೆ 2020-21ನೇ ಸಾಲಿಗೆ ₹8,460 ಕೋಟಿ ರಾಜಸ್ವ ಸಂಗ್ರಹ ಗುರಿ
Last Updated 9 ನವೆಂಬರ್ 2020, 0:15 IST
ಅಕ್ಷರ ಗಾತ್ರ

ಯಲಹಂಕ: ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನೆಲ ಕಚ್ಚಿರುವುದರ ಜೊತೆಗೆ 2013-14ನೇ ಸಾಲಿನಲ್ಲಿ ಕ್ರಯವಾಗಿರುವ ನಿವೇಶನಗಳನ್ನು ಮತ್ತೊಬ್ಬರಿಗೆ ಪರಭಾರೆ ಮಾಡುವುದಕ್ಕೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಇದರಿಂದಾಗಿ, ನಿವೇಶನಗಳ ನೋಂದಣಿಯಾಗದೆ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ರಾಜಸ್ವ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಪಂಚಾಯಿತಿಗಳಿಂದ ಇ-ಖಾತಾ ಆಗಿರುವ ನಿವೇಶನಗಳನ್ನು ಮಾತ್ರ ನೋಂದಣಿ ಮಾಡುವುದಾಗಿ ಉಪ ನೋಂದಣಾಧಿಕಾರಿಗಳು ಹೇಳಿರುವುದರಿಂದ ಈ ಹಿಂದೆ ಕ್ರಯವಾಗಿರುವ ನಿವೇಶನಗಳು ನೋಂದಣಿಯಾಗುತ್ತಿಲ್ಲ. ಅಲ್ಲದೆ, ಕಳೆದ ಮೇ ತಿಂಗಳಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಸ್ಥಳೀಯ ಪ್ರಾಧಿಕಾರಗಳಿಂದ ಮಂಜೂರಾತಿ ಪಡೆದಿರುವ ನಿವೇಶನಗಳಿಗೂ ಅನುಮೋದನೆ ದರವನ್ನೇ ಪರಿಗಣಿಸಿ ನೋಂದಣಿ ಮಾಡಲು ಸೂಚಿಸಿದೆ. ಆದರೂ ನೋಂದಣಿಗಳು ಆಗದಿರುವುದರಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗಿದೆ. ಬಿಗಿಗೊಳಿಸಿರುವ ಕೆಲವು ನಿಯಮಗಳನ್ನು ಸರಳೀಕರಣ ಮಾಡಿದರೆ ಸರ್ಕಾರಕ್ಕೂ ಆದಾಯ ಸಂದಾಯವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ನಗರ ಜಿಲ್ಲಾ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ₹8,460 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದ್ದು, ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗೆ ₹3,347 ಕೋಟಿ ಮುದ್ರಾಂಕ ಶುಲ್ಕ ಸಂಗ್ರಹವಾಗಬೇಕಾಗಿತ್ತು. ಆದರೆ, ₹2,084 ಕೋಟಿ ಮಾತ್ರ ಸಂಗ್ರಹವಾಗಿದ್ದು, ಶೇ38ರಷ್ಟು ಕುಸಿತ ಕಂಡಿದೆ. ಏಪ್ರಿಲ್‌ನಿಂದ ನವೆಂಬರ್‌ ವರೆಗೆ ಇಡೀ ರಾಜ್ಯದ ರಾಜಸ್ವ ಸಂಗ್ರಹದ ಗುರಿ ₹6,363 ಕೋಟಿ ಆಗಿದ್ದು, ಈಗ ₹4,775 ಕೋಟಿ ಸಂಗ್ರಹವಾಗಿದ್ದು, ₹1,729 ಕೋಟಿ ಕುಸಿತ ಕಂಡಿದೆ.

’ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿಸಲು ಕೆಲವು ನಿರ್ಬಂಧ ವಿಧಿಸಿರುವುದರಿಂದ ನೋಂದಣಿ ಮಾಡಿಸಲು ಇ-ಖಾತಾ ಸಲ್ಲಿಸಬೇಕೆಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಪಂಚಾಯಿತಿಯಲ್ಲಿ ಇ-ಖಾತಾ ಮಾಡಿಕೊಡಬೇಕೆಂದು ಕೇಳಿದರೆ, 2012-13ರ ಹಿಂದೆ ನೋಂದಣಿಯಾಗಿರುವ ನಿವೇಶನಗಳಿಗೆ ಮಾತ್ರ ನೀಡಲಾಗುವುದು. 2014-15ರ ನಂತರ ಕ್ರಯವಾಗಿರುವ ನಿವೇಶನಗಳನ್ನು ನೋಂದಣಿ ಮಾಡಲು ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ 2014-15ರಲ್ಲಿ ಕ್ರಯವಾಗಿರುವ ನಿವೇಶನಗಳನ್ನು ಮಾರಾಟಮಾಡಲು ಸಾಧ್ಯವಾಗದೆ ಸಮಸ್ಯೆಯಾಗುತ್ತಿದೆ‘ ಎಂದು ಇಟಗಲ್ಪುರ ಗ್ರಾಮದ ನಿವಾಸಿ ಎಂ.ಮೋಹನ್ ಕುಮಾರ್ ತಿಳಿಸಿದರು.

’ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶೇ 65ರಷ್ಟು ರಾಜಸ್ವ ಸಂಗ್ರಹವಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಶುಲ್ಕ ಸಂಗ್ರಹ ಕುಂಠಿತವಾಗಿತ್ತು. ಇ-ಖಾತಾ ಹೊಂದಿರುವ ನಿವೇಶನಗಳನ್ನು ನೋಂದಣಿ ಮಾಡಲಾಗುತ್ತಿದೆ. ಆದರೆ, ಇ-ಖಾತಾ ಇದ್ದರೂ ವಿಭಜನೆ ಮಾಡಿರುವ ನಿವೇಶನಗಳನ್ನು ನೋಂದಣಿ ಮಾಡಲು ಸಾಧ್ಯವಿಲ್ಲ‘ ಎಂದು ಉಪನೋಂದಣಾಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಎರಡು ತಿಂಗಳಲ್ಲಿ ಸುಧಾರಣೆ

‘ಕಾನೂನುಬದ್ಧವಾದ ಆಸ್ತಿಗಳನ್ನು ನೋಂದಣಿ ಮಾಡಲು ಮಾತ್ರ ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ಕಾಲ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಈ ಸಮಯದಲ್ಲಿ ರಾಜಸ್ವ ಸಂಗ್ರಹ ಶೇ 20ರಷ್ಟು ಕಡಿಮೆಯಾಗಿತ್ತು. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ರಾಜಸ್ವ ಸಂಗ್ರಹ ಚೇತರಿಕೆ ಕಂಡಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ಪಿ.ಮೋಹನ್ ರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT