ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸ್ಥಳೀಯ ಸಂಘಟನೆಗಳಿಂದಲೇ ರಾಜಕಾಲುವೆ ಪುನರುಜ್ಜೀವನ

ಆನೇಕಲ್‌ ತಾಲ್ಲೂಕಿನಲ್ಲಿ 11 ಕೆರೆಗಳಿಗೆ ಸಂಪರ್ಕ l ಶ್ರಮದಾನಕ್ಕೆ ಸಿದ್ಧತೆ
Last Updated 18 ಆಗಸ್ಟ್ 2022, 22:18 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನಲ್ಲಿ ಸಮುದಾಯದೊಂದಿಗೆ 11 ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಳೆಗಾಲ ಮುಗಿದ ಕೂಡಲೇ ಆರಂಭವಾಗಲಿದೆ.

ಮಣ್ಣು, ತ್ಯಾಜ್ಯದಿಂದ ಮುಚ್ಚಿಹೋಗಿರುವ ಸುಮಾರು 15 ಕಿ.ಮೀ. ರಾಜಕಾಲುವೆಯನ್ನು ತೆರವುಗೊಳಿಸುವ ಮೂಲಕ ಮಳೆ ನೀರು ಕೆರೆಯಿಂದ ಕೆರೆಗೆ ಹರಿಯಲು ನೆರವಾಗುವುದು ಪ್ರಮುಖ ಗುರಿ. ಈ ರಾಜಕಾಲುವೆ ಪುನರುಜ್ಜೀವನವಾಗುವುದರಿಂದ ಮಳೆಯ ಸಂದರ್ಭದಲ್ಲಿ ಬಡಾವಣೆ, ಹಳ್ಳಿ, ಮನೆಗೆ ನೀರು ನುಗ್ಗುವ ಸಮಸ್ಯೆ ಕೂಡನಿವಾರಣೆಯಾಗಲಿದೆ.

ಆನೇಕಲ್‌ ತಾಲ್ಲೂಕು ಪರಿಸರ ಸಂರಕ್ಷಣೆ ಫೆಡರೇಷನ್‌, ಫ್ರೆಂಡ್ಸ್ ಆಫ್‌ ಲೇಕ್ಸ್‌, ವಾಟರ್ ಇನ್‌ಸ್ಟಿಟ್ಯೂಟ್‌ ಆಫ್‌ ಬೆಂಗಳೂರು ವಿವಿ ಮತ್ತು ಇಂಡಿಯಾ ಕೇರ್ಸ್ ಫೌಂಡೇಷನ್‌ ವತಿಯಿಂದ ಈ ಸಮುದಾಯ ಆಧಾರಿತ ‘ರಾಜಕಾಲುವೆ ಪುನರುಜ್ಜೀವನ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಎಲ್ಲ ರೀತಿಯ ಸರ್ವೆ ಕಾರ್ಯ, ಒತ್ತುವರಿ ಗುರುತಿಸಲು ನೆರವಾಗುತ್ತಾರೆ. ಇನ್ನುಳಿದ ತೆರವು ಕಾರ್ಯಾಚರಣೆ ಹಾಗೂ ಮಾನವ ಸಂಪನ್ಮೂಲಕ್ಕೆ ಸಂಸ್ಥೆಗಳೇ ಹಣ ಭರಿಸಲಿವೆ. ಸುಮಾರು ₹3 ಕೋಟಿ ವೆಚ್ಚವಾಗಲಿದೆ.‌

‘ದಕ್ಷಿಣ ಪಿನಾಕಿನಿ ಮೂಲಕ ತಮಿಳು ನಾಡಿಗೆ ಹರಿಯುವ ನಾಲೆಯ ವ್ಯಾಪ್ತಿಯಲ್ಲಿ 11 ಕೆರೆಗಳಿದ್ದು, ಮಳೆಗಾಲದಲ್ಲಿ ನೀರು ರಾಜಕಾಲುವೆಯಲ್ಲಿ ಹರಿಯಲು ಸಾಧ್ಯವಿಲ್ಲ. ಹೀಗಾಗಿ ಮನೆಗಳಿಗೆ ನುಗ್ಗುತ್ತಿದೆ. ಇದನ್ನು ನಿವಾರಿಸುವ ಸಲುವಾಗಿ ಜನರೊಂದಿಗೆ ‘ರಾಜಕಾಲುವೆ ಪುನರುಜ್ಜೀವನ’ ಕಾರ್ಯ ಆರಂಭಿಸಲಾಗುತ್ತದೆ. ಇದಾದ ಮೇಲೆ ಕೆರೆಗಳು ತುಂಬುವ ಜೊತೆಗೆ 80 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಯಂತ್ರಗಳ ಜೊತೆಗೆ ಸಾಂಪ್ರದಾಯಿಕವಾಗಿ ನೀರಿನ ಹರಿವು ಬಲ್ಲ 25 ಕುಟುಂಬಗಳು ಈ ಕಾಲುವೆ ಕಾಮಗಾರಿಯಲ್ಲಿ ಭಾಗಿಯಾಗಲಿದ್ದು, ಅವರ ಜೀವನೋಪಾಯಕ್ಕೂ ಸಹಾಯವಾಗಲಿದೆ. ಸ್ಥಳೀಯರೂ ಶ್ರಮಾದಾನ ಮಾಡಲಿದ್ದಾರೆ’ ಎಂದು ಕೆರೆಗಳ ಸಂರಕ್ಷಣೆ ಕಾರ್ಯಕರ್ತ ಹಾಗೂ ಸಹಾಯಕ ಆಯುಕ್ತ ಕ್ಯಾಪ್ಟನ್‌ ಸಂತೋಷ್‌ಕುಮಾರ್‌ತಿಳಿಸಿದರು.

‘ಚೋಳರ ಕಾಲದಲ್ಲಿ ನಿರ್ಮಾಣ ವಾದ ಆನೇಕಲ್‌ನ ದೊಡ್ಡಕೆರೆಯಿಂದ ರಾಜ್ಯದ ಗಡಿಭಾಗದ ಅತ್ತಿಬೆಲೆ ಕೆರೆಯವರೆಗೆ ರಾಜಕಾಲುವೆ ಮರು ನಿರ್ಮಿಸಲಾಗುತ್ತದೆ. ಸಮುದಾಯವೇ ಎಲ್ಲ ವೆಚ್ಚವನ್ನು ಭರಿಸಲಿದ್ದು, ಸರ್ಕಾರ ಇಲಾಖೆಗಳ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯಲಿದೆ. 10 ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುತ್ತದೆ. ಮುಂದಿನ ಮಳೆಗಾಲದಲ್ಲಿ ನೀರು ರಾಜಕಾಲುವೆಯಲ್ಲಿ ಹರಿಯುವಂತೆ ಮಾಡಲಾಗುತ್ತದೆ. ಮುತ್ತಾನಲ್ಲೂರು ಕೆರೆಯಿಂದ ಬಿದರನಗುಪ್ಪೆ ಕೆರೆಯವರೆಗಿನ ರಾಜಕಾಲುವೆಯನ್ನೂ ತೆರವುಗೊಳಿಸಲಾಗುವುದು’ ಎಂದರು.

ಮುಂದಿನ ಆಗಸ್ಟ್‌ಗೆ ಸಿದ್ಧ
’ಸಮುದಾಯದೊಂದಿಗೆ ರಾಜಕಾಲುವೆಯ ಒತ್ತುವರಿಯನ್ನು ತೆರವು ಮಾಡುವ ಯೋಜನೆಯನ್ನು ಒಂದೂವರೆ ವರ್ಷದಿಂದ ರೂಪಿಸುತ್ತಿದ್ದೇನೆ. ಇದೀಗ ಅದಕ್ಕೊಂದು ರೂಪು ಸಿಕ್ಕಿದ್ದು, ವಿಸ್ತೃತ ಯೋಜನಾ ವರದಿಗೂ ಸದ್ಯದಲ್ಲಿಯೇ ಸಮ್ಮತಿ ಸಿಗಲಿದೆ. ಮಳೆಗಾಲದ ನಂತರ ರಾಜಕಾಲುವೆ ಒತ್ತುವರಿ ತೆರವು ಹಾಗೂ ಪುನರುಜ್ಜೀವನ ಕಾಮಗಾರಿ ಆರಂಭವಾಗಲಿದೆ. 2023ರ ಆಗಸ್ಟ್‌ ವೇಳೆಗೆ ಸುಮಾರು 15 ಕಿ.ಮೀ. ರಾಜಕಾಲುವೆ 11 ಕೆರೆಗಳನ್ನು ಪುನರ್‌ ಸಂಪರ್ಕಿಸಲಿವೆ‘ ಎಂದು ಕೆರೆಗಳ ಸಂರಕ್ಷಣೆ ಕಾರ್ಯಕರ್ತ ಕ್ಯಾಪ್ಟನ್‌ ಸಂತೋಷ್‌ಕುಮಾರ್‌ ತಿಳಿಸಿದರು.

ತಾಂತ್ರಿಕ ನಿರ್ದೇಶನ
ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವಲ್ಲಿ ತಾಂತ್ರಿಕ ನಿರ್ದೇಶನ ನೀಡಲಾಗುತ್ತದೆ. ಸಾರ್ವಜನಿಕ ಹಾಗೂ ಸಂಘ–ಸಂಸ್ಥೆಗಳ ಸಹಯೋಗದೊಂದಿಗೆ ರಾಜಕಾಲುವೆ ಪುನರುಜ್ಜೀವನ ಕಾರ್ಯ ನಡೆಯಲು ಯಾವುದೇ ಅಡೆತಡೆಗಳು ಬಂದರೆ ಅವುಗಳನ್ನು ತುರ್ತಾಗಿ ಪರಿಹರಿಸಲು ಉದ್ದೇಶಿಸಲಾಗಿದೆ. ಕಂದಾಯ ಇಲಾಖೆಯ ಸಹಕಾರದೊಂದಿಗೆ ಸಣ್ಣ ನೀರಾವರಿ ಇಲಾಖೆ ಆನೇಕಲ್‌ ತಾಲ್ಲೂಕಿನಲ್ಲಿ ರಾಜಕಾಲುವೆಗಳ ಪುನರ್‌ ಸ್ಥಾಪನೆಯೊಂದಿಗೆ 11 ಕೆರೆಗಳ ಸಂಪರ್ಕ ಕಲ್ಪಿಸಲು ನೆರವು ನೀಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ತಿಳಿಸಿದರು.

ಸಂಪರ್ಕ ಸಾಧಿಸಲಿರುವ ಕೆರೆಗಳು
ನಂಜುಂಡಯ್ಯನ ಕೆರೆ, ಸಿಡಿಹೊಸಕೋಟೆ, ಆನೇಕಲ್‌ ದೊಡ್ಡಕೆರೆ, ಕಮ್ಮಸಂದ್ರ ಅಗ್ರಹಾರ ಕೆರೆ, ಬ್ಯಾಗದದೇನಹಳ್ಳಿ ಕೆರೆ, ಮಾರಸೂರು ಕೆರೆ, ಕೂನ್‌ ಮಡಿವಾಳ ಕೆರೆ, ಶೆಟ್ಟಿಹಳ್ಳಿ ಕೆರೆ, ತಟ್ಟನಹ‌ಳ್ಳಿ ಕೆರೆ, ಮಾಯಸಂದ್ರ ಕೆರೆ, ಅರೆಹಳ್ಳಿ ಕೆರೆ, ಅತ್ತಿಬೆಲೆ ಮೂಲ ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT