ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೀಸ್ ರಸ್ತೆ ಸ್ವಚ್ಛವಾದರೂ ದೊರಕದ ಮುಕ್ತಿ

ಮರಳು ಲಾರಿ, ಗುಜರಿ ವಾಹನಗಳ ನಿಲುಗಡೆ ತಾಣ
Last Updated 24 ಮಾರ್ಚ್ 2021, 3:31 IST
ಅಕ್ಷರ ಗಾತ್ರ

ಬೆಂಗಳೂರು: ವರ್ತುಲ ರಸ್ತೆಯ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಿಗ್ನಲ್‌ನಿಂದ ನಾಯಂಡಹಳ್ಳಿ ಜಂಕ್ಷನ್ ತನಕ ಸರ್ವೀಸ್ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದರೂ, ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗುವ ಲಕ್ಷಣಗಳಿಲ್ಲ.

ನಾಯಂಡಹಳ್ಳಿಯಿಂದ ಹೊಸಕೆರೆ ಹಳ್ಳಿ ತನಕ ಮಾತ್ರ ವರ್ತುಲ ರಸ್ತೆಗೆ ಸರ್ವೀಸ್ ರಸ್ತೆ ಇದ್ದರೂ, ಇಲ್ಲದ ಸ್ಥಿತಿಯಲ್ಲಿ ಇಷ್ಟು ದಿನ ಇತ್ತು. ಕಟ್ಟಡಗಳ ಅವಶೇಷ, ಕಸ ಸುರಿಯುವ, ಮರಳು, ಜಲ್ಲಿ ಲಾರಿಗಳು, ಗುಜರಿ ವಾಹನಗಳ ನಿಲುಗಡೆ ತಾಣವಾಗಿತ್ತು.

‘ವಿಧಾನ ಪರಿಷತ್ತಿನ ಸದಸ್ಯ ಯು.ಬಿ. ವೆಂಕಟೇಶ್ ಅವರು ಈ ಸರ್ವೀಸ್ ರಸ್ತೆ ಅವ್ಯವಸ್ಥೆ ಬಗ್ಗೆ ಸದನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆ ಕೇಳಿದ್ದರು. ಸರ್ವೀಸ್ ರಸ್ತೆಯಲ್ಲಿ ಎಲ್ಲ ಅಡೆತಡೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಿಗೊಳಿಸಲಾಗಿದೆ’ ಎಂಬ ಉತ್ತರವನ್ನು ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ಸುಳ್ಳು ಮಾಹಿತಿ ನೀಡಿದ್ದ ಕಾರಣಕ್ಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್ ಕೂಡ ನೀಡಲಾಗಿತ್ತು.

ಈ ಬೆಳವಣಿಗೆ ಬಳಿಕ ಈಗ ಸರ್ವೀಸ್ ರಸ್ತೆಯನ್ನು ಆವರಿಸಿಕೊಂಡಿದ್ದ ಕಟ್ಟಡ ತ್ಯಾಜ್ಯವನ್ನು ತೆಗೆಯುವ ಕೆಲಸ ಭರದಿಂದ ನಡೆಯುತ್ತಿದೆ. ಜೆಸಿಬಿ ಮೂಲಕ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಆದರೆ, ಮರಳು, ಜಲ್ಲಿ ಲಾರಿಗಳು ಇದೇ ಸರ್ವೀಸ್ ರಸ್ತೆಯಲ್ಲಿ ನಿಲ್ಲುವುದು ತಪ್ಪಿಲ್ಲ.

ನಾಯಂಡಹಳ್ಳಿ ಜಂಕನ್‌ನಿಂದ ಹೊರಟರೆ ಎಡ ಬದಿಯ ಸರ್ವೀಸ್ ರಸ್ತೆಯಲ್ಲಿ ಗುಜರಿ ವಾಹನಗಳು ನಿಂತಿದ್ದರೆ, ಇನ್ನೊಂದು ಬದಿಯಲ್ಲಿ ಮರಳು, ಜಲ್ಲಿ ಮಾರಾಟದ ಕೇಂದ್ರವಾಗಿದೆ. ಜೊತೆಗೆ ಹೂವು ಹಣ್ಣಿನ ಗಿಡಗಳನ್ನು ಮಾರಾಟ ಮಾಡುವ ನರ್ಸರಿಯೊಂದು ರಸ್ತೆಯನ್ನೇ ಆವರಿಸಿಕೊಂಡಿದೆ.

ಕೆಳ ಸೇತುವೆ ನಿರ್ಮಾಣಕ್ಕೆ ಅಗತ್ಯ ಇರುವ ಪ್ರೀಕಾಸ್ಟ್‌ ಬಾಕ್ಸ್ ಕಲ್ವರ್ಟ್‌ಗಳನ್ನು ಬಿಬಿಎಂಪಿಯೇ ತಂದು ಸರ್ವೀಸ್ ರಸ್ತೆಯ ಉದ್ದಕ್ಕೂ ಜೋಡಿಸಿದೆ. ಇದ್ಯಾವುದನ್ನೂ ತೆರವುಗೊಳಿಸದ ಬಿಬಿಎಂಪಿ, ಮಣ್ಣಿನ ರಾಶಿಯನ್ನಷ್ಟೇ ಕರಗಿಸುತ್ತಿದೆ.

ನೈಸ್ ರಸ್ತೆ ಸಿಗ್ನಲ್ (ವೀರಭದ್ರನಗರ) ದಾಟಿ ಮುಂದೆ ಸಾಗಿದರೆ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗಳಲ್ಲೂ ಗ್ಯಾರೇಜ್‌ ವಾಹನಗಳ ನಿಲುಗಡೆ ತಾಣವಾಗಿದೆ. ಹೊಸಕೆರೆ ಹಳ್ಳಿ ಮೇಲ್ಸೇತುವೆ ದಾಟಿದರೆ ರಿಂಗ್ ರಸ್ತೆಗೆ ಸರ್ವೀಸ್ ರಸ್ತೆಗಳಿಲ್ಲ. ಇರುವ ಫುಟ್‌ಪಾತ್‌ಗಳೂ ಪಾದಚಾರಿಗಳಿಗೆ ಯೋಗ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಕುರಿತು ಪ್ರಕ್ರಿಯಿಸಿದ ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಸ್ತೆ, ಮೂಲಸೌಕರ್ಯ) ಬಿ.ಎಸ್. ಪ್ರಹ್ಲಾದ್, ‘ಪ್ರೀಕಾಸ್ಟ್ ಕಲ್ವರ್ಟ್‌ಗಳು ಬೇರೆಡೆಗೆ ಸ್ಥಳಾಂತರಿಸುವ ತನಕ ಅಲ್ಲಿಯೇ ಇರಲಿವೆ. ಮರಳು ಲಾರಿಗಳು, ಗುಜರಿ ವಾಹನಗಳನ್ನು ತೆರವುಗೊಳಿಸಲು ಪೊಲೀಸರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT