ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಸಾವಿರ ಕೆರೆಗಳಿಗೆ ನದಿನೀರು: ಪ್ರಧಾನಿಗೆ ಬಿ.ಎಸ್‌.ಯಡಿಯೂರಪ್ಪ ಪತ್ರ

ಪಶ್ಚಿಮದೆಡೆ ಹರಿಯುವ ನದಿಗಳ ಹೆಚ್ಚುವರಿ ನೀರು ಬಳಕೆ
Last Updated 27 ಫೆಬ್ರುವರಿ 2020, 2:40 IST
ಅಕ್ಷರ ಗಾತ್ರ

ಬೆಂಗಳೂರು: ಜಲಕ್ಷಾಮದಿಂದ ತತ್ತರಿಸಿರುವ 30 ಸಾವಿರ ಗ್ರಾಮಗಳ ಸುಮಾರು 36 ಸಾವಿರ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದಾಗಿದ್ದಾರೆ.

ಈ ಗ್ರಾಮಗಳಲ್ಲಿ ಜಲ ಸುರಕ್ಷತೆಯ ಉದ್ದೇಶದಿಂದ ಪಶ್ಚಿಮದ ಕಡೆಗೆ ಹರಿಯುವ ನದಿಗಳ ಹೆಚ್ಚುವರಿ ನೀರನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು. ಸುಮಾರು 484 ಟಿಎಂಸಿ ಅಡಿ ನೀರನ್ನು ತಿರುಗಿಸುವ ಮೂಲಕ ಕೆರೆ–ಕೊಳ್ಳಗಳನ್ನು ತುಂಬಿಸಲಾಗುತ್ತದೆ.

ಮುಖ್ಯಮಂತ್ರಿಯವರು ತಮ್ಮ ಕನಸಿನ ಯೋಜನೆಯ ವಿವರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದೇ ತಿಂಗಳ 10 ರಂದು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಅಂತರ್‌ ನದಿ ಪಾತ್ರಗಳ ನೀರಿನ ವರ್ಗಾವಣೆ ಮೂಲಕ ಹೆಚ್ಚುವರಿ ನೀರನ್ನು ತಿರುಗಿಸಿ, ಕೆರೆ– ಕೊಳ್ಳಗಳನ್ನು ತುಂಬಬಹುದಾಗಿದೆ. ಇದರಿಂದ ಅಷ್ಟೂ ಹಳ್ಳಿಗಳ ಅಂತರ್ಜಲವನ್ನು ಪುನಶ್ಚೇತನಗೊಳಿಸಬಹುದಾಗಿದೆ. ರೈತರ ಬದುಕು ಸಮೃದ್ಧಿಯಾಗಲಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಈ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ನ್ಯಾಷನಲ್‌ ಪರ್ಸ್ಪೆಕ್ಟಿವ್‌ ಪ್ಲಾನ್‌ (ಎನ್‌ಪಿಪಿ) ಯೋಜನೆ ಅಡಿ ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಒಂದು ಕೆರೆ– ಆ ಕೆರೆಗೆ ನದಿಯ ನೀರು’ ಎಂಬ ಘೋಷವಾಕ್ಯದಡಿ ದೊಡ್ಡ ಮಟ್ಟದಲ್ಲಿ ಯೋಜನೆಗೆ ಚಾಲನೆ ನೀಡಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಈ ಯೋಜನೆಯನ್ನು ಜಾರಿಗೊಳಿಸಲು ತುಮಕೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ವಿವಿಧ ನದಿ ನೀರಿನ ವಿವಾದಗಳಲ್ಲಿ ನ್ಯಾಯಮಂಡಳಿಗಳು ರಾಜ್ಯಕ್ಕೆ 1,230 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿವೆ. ಆದರೆ, ರಾಜ್ಯಕ್ಕೆ 2050ರ ವೇಳೆಗೆ ಕುಡಿಯುವ ಉದ್ದೇಶ, ಕೈಗಾರಿಕೆ ಮತ್ತು ನೀರಾವರಿಗಾಗಿ 3 ಸಾವಿರ ಟಿಎಂಸಿ ಅಡಿಗಳಷ್ಟು ನೀರು ಬೇಕಾಗುತ್ತದೆ. ಅಂದರೆ 1,770 ಟಿಎಂಸಿ ಅಡಿ ನೀರು ಕೊರತೆ ಆಗುತ್ತದೆ. ರಾಜ್ಯ ಸರ್ಕಾರಜಲ ಸಂರಕ್ಷಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಹಲವು ಅಧ್ಯಯನ ವರದಿಗಳು ಅಂತರ್ ನದಿ ಪಾತ್ರಗಳ ನೀರಿನ ವರ್ಗಾವಣೆ ಸೂಕ್ತವೆಂದು ಹೇಳಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT