ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಅಪಘಾತ: ಒಂದೇ ತಿಂಗಳಿನಲ್ಲಿ 77 ಮಂದಿ ಸಾವು

ಅಪಾಯಕಾರಿ ಸ್ಥಳ ಪರಿಶೀಲನೆಗೆ ವಿಶೇಷ ತಂಡ
Last Updated 8 ಮಾರ್ಚ್ 2020, 21:25 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಅವಸರ, ಅತೀ ವೇಗದ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ನಗರದಲ್ಲಿ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಈ ವರ್ಷದ ಜನವರಿಯಲ್ಲಿ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘ನಗರದಲ್ಲಿ ಜನವರಿ 1ರಿಂದ 31ರವರೆಗೆ 407 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 344 ಮಂದಿ ಗಾಯಗೊಂಡಿದ್ದಾರೆ. ಬಹುತೇಕರು ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಅಂಗವಿಕಲರೂ ಆಗಿದ್ದಾರೆ’ ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವಸರವೇ ಅಪಘಾತಕ್ಕೆ ಕಾರಣ’ ಹಾಗೂ ‘ಅತೀ ವೇಗದ ಸಂಚಾರ; ಪ್ರಾಣಕ್ಕೆ ಸಂಚಕಾರ’ ಸೇರಿ ಹಲವು ಜಾಗೃತಿ ಫಲಕಗಳನ್ನು ಬಹುತೇಕ ಮಾಲೀಕರು ತಮ್ಮ ವಾಹನಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಇದುವರೆಗೂ ಸಂಭವಿಸಿದ ಅಪಘಾತದಲ್ಲಿ ಇಂಥ ವಾಹನಗಳ ಸಂಖ್ಯೆಯೇ ಹೆಚ್ಚಿದೆ. ಮೃತಪಟ್ಟವರಲ್ಲಿ ಪಾದಚಾರಿಗಳೇ ಹೆಚ್ಚಿದ್ದಾರೆ’ ಎಂದರು.

‘ನಗರದ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳ ವಿವರಗಳನ್ನು ಪ್ರತಿ ತಿಂಗಳು ಪಡೆಯಲಾಗುತ್ತಿದೆ. ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (ಬಳ್ಳಾರಿ ರಸ್ತೆ), ಹೊರವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಅಕ್ಕ– ಪಕ್ಕದಲ್ಲಿರುವ ರಸ್ತೆಗಳಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇಂಥ ರಸ್ತೆಯಲ್ಲೇ ಅಪಘಾತಗಳು ಹೆಚ್ಚುತ್ತಿವೆ’ ಎಂದರು.

ಅಪಾಯಕಾರಿ ಸ್ಥಳ ಪರಿಶೀಲನೆ: ಹೆಚ್ಚುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲು ವಿಶೇಷ ತಂಡ ರಚಿಸಲಾಗಿದೆ. ಪೊಲೀಸರು, ಸಾರಿಗೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಟೋಲ್‌ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ನಗರದಲ್ಲಿರುವ ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ, ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ವರದಿ ಸಿದ್ಧಪಡಿಸುತ್ತಿದ್ದಾರೆ.

‘ಮೇಲಿಂದ ಮೇಲೆ ಅಪಘಾತ ಸಂಭವಿಸುವ ಸ್ಥಳಗಳನ್ನುಬ್ಲಾಕ್‌ ಸ್ಪಾಟ್‌ಗಳೆಂದು ಗುರುತು ಮಾಡಲಾಗುತ್ತಿದೆ. ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದರು.

‘ಮಾಸ್ಕ್‌ಗಿರುವ ಉತ್ಸಾಹ ಹೆಲ್ಮೆಟ್‌ಗಿಲ್ಲ’
‘ಕೋವಿಡ್–19 ವೈರಸ್‌ನಿಂದ ವಿಶ್ವದಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದು, ಪ್ರತಿಯೊಬ್ಬರು ಸರ್ಜಿಕಲ್ ಮಾಸ್ಕ್ ಧರಿಸಲು ಬಯಸುತ್ತಿದ್ದಾರೆ. ವಿಶ್ವದಾದ್ಯಂತ ಅಪಘಾತದಲ್ಲಿ ವರ್ಷಕ್ಕೆ 13 ಲಕ್ಷ ಮಂದಿ ಮೃತಪಡುತ್ತಿದ್ದು, ಇಂದಿಗೂ ಬಹುತೇಕರು ಹೆಲ್ಮೆಟ್ ಧರಿಸುತ್ತಿಲ್ಲ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

ಹರಿಯಾಣದ ಐಪಿಎಸ್ ಅಧಿಕಾರಿ ಪಂಕಜ್‌ ನೈನ್,‘ಭಾರತದಲ್ಲಿ ಕೇವಲ ಒಂದೇ ಕೋವಿಡ್–19 ಪ್ರಕರಣ ಕಂಡುಬಂದಿದೆ. ಜನರೆಲ್ಲರೂ ಮಾಸ್ಕ್‌ ಧರಿಸಲು ಆಸಕ್ತಿ ತೋರುತ್ತಿದ್ದಾರೆ. ನಿತ್ಯವೂ 400 ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಆದರೆ, ಹೆಲ್ಮೆಟ್ ಧರಿಸಲು ಕಾಳಜಿ ವಹಿಸುತ್ತಿಲ್ಲ’ ಎಂದೂ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT