ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗಾಗಿ ಕಲ್ಯಾಣಿಯನ್ನೇ ಮುಚ್ಚಿದರು!

‘ಕಲ್ಯಾಣಿ ಉಳಿಸಿ’ ಎಂಬ ಟ್ವಿಟರ್ ಅಭಿಯಾನ ಪ್ರಾರಂಭ l ಬಿಬಿಎಂಪಿಯಿಂದ ಕಾಮಗಾರಿ
Last Updated 3 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ರಸ್ತೆ ವಿಸ್ತರಣೆ ನೆಪವೊಡ್ಡಿ ಬಿಬಿಎಂಪಿಯವರು ಕಲ್ಯಾಣಿಯನ್ನೇ ಮುಚ್ಚಿರುವ ಘಟನೆ ಬನ್ನೇರುಘಟ್ಟ ರಸ್ತೆ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.

ಬನ್ನೇರುಘಟ್ಟ ರಸ್ತೆ ವಿಸ್ತರಣೆಗಾಗಿ ಗೊಟ್ಟಿಗೆರೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇದ್ದ ನೂರಾರು ವರ್ಷಗಳ ಇತಿಹಾಸವಿರುವ ಕಲ್ಯಾಣಿಯನ್ನು ಪಾಲಿಕೆ ಯಾರ ಗಮನಕ್ಕೂ ತಾರದೇ ಮುಚ್ಚಿಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ‘ಕಲ್ಯಾಣಿ ಉಳಿಸಿ’ ಎಂಬ ಟ್ವಿಟರ್ ಅಭಿಯಾನ ಶುರುವಾಗಿದೆ.

‘ನಮ್ಮ ತಾತ, ಮುತ್ತಾತನ ಕಾಲದಿಂದಲೂ ಈ ಕಲ್ಯಾಣಿ ಇತ್ತು. ಇಲ್ಲಿ ನಾವು ಈಜುತ್ತಿದ್ದೆವು. ಕಲ್ಯಾಣಿ ತುಂಬಿ ಹೆಚ್ಚಾದ ನೀರು ಗದ್ದೆಗಳಿಗೆ ಹೋಗುತ್ತಿತ್ತು. ರಸ್ತೆ ಅಭಿವೃದ್ಧಿ ಹೆಸರಲ್ಲಿ ಪುರಾತನವಾದ ಕಲ್ಯಾಣಿಯನ್ನು ಮುಚ್ಚಿದ್ದು ಅಕ್ಷಮ್ಯ, ಗ್ರಾಮಸ್ಥರ ಅಭಿಪ್ರಾಯ ಪಡೆಯದೇ ಏಕಾಏಕಿ ಮುಚ್ಚಿರುವುದು ಸರಿಯಲ್ಲ’ ಎನ್ನುತ್ತಾರೆ ಗ್ರಾಮದ ನಿವಾಸಿ ಮುನಿಕೃಷ್ಣ.

‘ಬನ್ನೇರುಘಟ್ಟ ಬಿಟ್ಟರೆ ಇಲ್ಲಿ ಮಾತ್ರವೇ ಕಲ್ಯಾಣಿ ಇತ್ತು. ಹಿಂದೆ ದೇವಸ್ಥಾನಕ್ಕೆ ಈ ಕಲ್ಯಾಣಿಯಿಂದಲೇ ನೀರು ಪೂರೈಸಲಾಗುತ್ತಿತ್ತು. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ರಾತ್ರೋರಾತ್ರಿ ಕಲ್ಯಾಣಿ ಮುಚ್ಚಿರುವುದು ಸರಿಯಲ್ಲ, ರಸ್ತೆ ವಿಸ್ತರಣೆಗೆ ಪರ್ಯಾಯ
ವ್ಯವಸ್ಥೆ ಮಾಡಿಕೊಂಡು ಇದನ್ನು ಉಳಿಸಿಕೊಡಬೇಕು ಮತ್ತು ಬಿಬಿಎಂಪಿಯೇ ಇದನ್ನು ಅಭಿವೃದ್ಧಿಪಡಿಸಬೇಕು’ ಎನ್ನುತ್ತಾರೆ ಗೊಟ್ಟಿಗೆರೆ ನಿವಾಸಿ ಮಂಜೇಶ್.

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಟಿ.ನಾರಾಯಣ, ‘ಈ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಇರುವುದರಿಂದ ರಸ್ತೆ ವಿಸ್ತರಣೆ ಅಗತ್ಯವಿತ್ತು. ಹಳೆಯದಾದ ಕಲ್ಯಾಣಿ ಮುಚ್ಚುವುದರಿಂದ ಯಾರಿಗೇನೂ ತೊಂದರೆ ಇಲ್ಲ’ ಎಂದರು.

‘ಕಲ್ಯಾಣಿಯು ಬತ್ತಿ ಹೋಗಿತ್ತು. ಮಳೆಗಾಲದಲ್ಲೇ ಸ್ಥಳ ಪರೀಕ್ಷಿಸಿ, ಇದು ಜನರ ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡು, ಗ್ರಾಮಸ್ಥರ ಅಭಿಪ್ರಾಯ ಪಡೆದು ಕಲ್ಯಾಣಿ ಮುಚ್ಚಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸೋಮಶೇಖರ್.

‘ಕಲ್ಯಾಣಿ ಮುಚ್ಚಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಆಯುಕ್ತರ ಜತೆ ಚರ್ಚಿಸಲಾಗಿದ್ದು, ಬೇರೊಂದು ಕಡೆ ಕಲ್ಯಾಣಿಯನ್ನು ಪುನರ್ ನಿರ್ಮಿಸಿಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ’ ಎನ್ನುತ್ತಾರೆ ಶಾಸಕ ಎಂ. ಕೃಷ್ಣಪ್ಪ.

‘ಕಲ್ಯಾಣಿ, ಕೆರೆ, ಗೋಕಟ್ಟೆಗಳನ್ನು ಮುಚ್ಚುವುದು ಅಕ್ಷಮ್ಯ. ಕಲ್ಯಾಣಿಗಳು ಜೈವಿಕ ವ್ಯವಸ್ಥೆಯ ಭಾಗ. ನಮ್ಮ ಪೂರ್ವಜರು ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ, ತಮ್ಮ ಅನುಭವ ಆಧರಿಸಿ, ಬೇಸಿಗೆಯಲ್ಲೂ ನೀರು ನಿಲ್ಲುವಂತಹ ಮೆಟ್ಟಿಲು ಬಾವಿಗಳನ್ನು ನಿರ್ಮಿಸಿದ್ದಾರೆ. ಕಲ್ಯಾಣಿಗಳಿಂದ ತಾಪಮಾನ ಹತೋಟಿಯಲ್ಲಿರುವ ಜತೆಗೆ ಅಂತರ್ಜಲವೂ ವೃದ್ಧಿಯಾಗುತ್ತದೆ’ ಎಂದು ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ ಹೇಳಿದರು.

‘ರಸ್ತೆ ವಿಸ್ತರಣೆಯೊಂದೇ ಅಭಿವೃದ್ಧಿಯಲ್ಲ, ಮನುಷ್ಯನಿಗೆ ಹಾಗೂ ಸಕಲ ಜೀವಕೋಶಕ್ಕೆ ಜೀವಜಲ ಪ್ರಧಾನವಾದದ್ದು. ಒಂದನ್ನು ಹಾಳು ಮಾಡಿ ಇನ್ನೊಂದನ್ನು ಕಟ್ಟುವುದು ಅಭಿವೃದ್ಧಿ ಹೇಗಾಗುತ್ತದೆ? ಮುಚ್ಚಿರುವ ಕಲ್ಯಾಣಿಯನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT