ಬೆಂಗಳೂರು: ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಬಳಿಯ ಹೆದ್ದಾರಿಯಲ್ಲಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ದರೋಡೆಕೋರನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಬಂಧಿತ ರೌಡಿಶೀಟರ್. ಮಾಗಡಿ ತಾಲ್ಲೂಕಿನ ಆಲೂರು ಗ್ರಾಮದ ನಿವಾಸಿ.
ಹೆದ್ಧಾರಿಯ ಕಂಬಾಳು ಗ್ರಾಮದ ಬಳಿ ದಾಬಸ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲು ಯಶಸ್ವಿ ಆಗಿದ್ದಾರೆ. ಆರೋಪಿಗೆ ದಾಬಸ್‌ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿ ಬೈಕ್ನಲ್ಲಿ ಬಂದು ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿ 56 ಪ್ರಕರಣಗಳು ದಾಖಲಾಗಿದ್ದವು. ಶನಿವಾರ ಸಂಜೆ ದರೋಡೆಗೆ ಹೊಂಚು ಹಾಕುತ್ತಿದ್ದ. ಖಚಿತ ಮಾಹಿತಿ ಆಧರಿಸಿ, ದಾಬಸ್‌ಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ಬಂಧಿಸಲು ತೆರಳಿದ್ದ ವೇಳೆ ಹೆಡ್ ಕಾನ್‌ಸ್ಟೆಬಲ್ ಇಮ್ರಾನ್ ಪಾಷಾ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಇನ್‌ಸ್ಪೆಕ್ಟರ್ ಬಿ.ರಾಜು ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದರು’ ಎಂದು ಮೂಲಗಳು ತಿಳಿಸಿವೆ.
2019ರಲ್ಲೂ ಆರೋಪಿ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಜಾಮೀನನ ಮೇಲೆ ಬಿಡುಗಡೆಯಾಗಿ ಮತ್ತೆ ದರೋಡೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.
ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.