ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆ ಆರೋಪಿ ಕಾಲಿಗೆ ಗುಂಡೇಟು

Last Updated 8 ನವೆಂಬರ್ 2020, 16:55 IST
ಅಕ್ಷರ ಗಾತ್ರ

ಬೆಂಗಳೂರು: ಸುಲಿಗೆ ಪ್ರಕರಣದ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಅರ್ಬಾಜ್ ಖಾನ್ ಅಲಿಯಾಸ್ ಕಾಂಚಾ (22) ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ.

‘ಕೆ.ಜಿ.ಹಳ್ಳಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಅರ್ಬಾಜ್, ಅ. 22‌ರಂದು ಕಾಚರಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಬೇಕರಿಗೆ ಹೋಗಿ ಮಾಲೀಕ ಶರತ್‌ ಎಂಬುವರನ್ನು ಬೆದರಿಸಿ ₹ 4,500 ಸುಲಿಗೆ ಮಾಡಿದ್ದ. ಬೇಕರಿ ಮುಂದಿದ್ದ ಸಾರ್ವಜನಿಕರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿದ್ದ. ಕೃತ್ಯದ ಬಳಿಕ ಪರಾರಿಯಾಗಿ ತಮಿಳುನಾಡಿನಲ್ಲಿದ್ದ ಆತನನ್ನು ಬಾಣಸವಾಡಿ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಹೇಳಿದರು.

‘ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗರ್ ಜಪ್ತಿ ಮಾಡಲು ಹಾಗೂ ಪ್ರಕರಣದ ಮಹಜರು ಮಾಡಲು ಆರೋಪಿಯನ್ನು ಎಚ್‌ಆರ್‌ಬಿಆರ್‌ 1ನೇ ಹಂತದಲ್ಲಿರುವ ನೀರಿನ ಟ್ಯಾಂಕ್‌ ಹಿಂಭಾಗದ ಜಾಗಕ್ಕೆ ಭಾನುವಾರ ಬೆಳಿಗ್ಗೆ ಕರೆದೊಯ್ಯಲಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಡ್ರ್ಯಾಗರ್‌ ತೆಗೆದುಕೊಂಡಿದ್ದ ಆರೋಪಿ, ಪಿಎಸ್‌ಐ ಷಹಜಹಾನ್ ಅವರಿಗೆ ಚುಚ್ಚಿ ತಪ್ಪಿಸಿಕೊಳ್ಳಲು ಮುಂದಾಗಿದ್ದ.’

‘ಪಿಸ್ತೂಲ್ ಹೊರ ತೆಗೆದು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್‌ಸ್ಪೆಕ್ಟರ್‌ ಎಚ್‌. ಜಯರಾಜ್, ಶರಣಾಗುವಂತೆ ಆರೋಪಿಗೆ ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿ, ಪುನಃ ಹಲ್ಲೆ ಮಾಡಲು ಮುಂದಾಗಿದ್ದ. ಅದೇ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಅವರು ಆರೋಪಿ ಎಡಗಾಲಿಗೆ ಗುಂಡು ಹೊಡೆದರು. ಸ್ಥಳದಲ್ಲಿ ಕುಸಿದುಬಿದ್ದ ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಶರಣಪ್ಪ ವಿವರಿಸಿದರು.

‘ಗಾಯಗೊಂಡಿರುವ ಪಿಎಸ್ಐ ಷಹಜಹಾನ್ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ಹೇಳಿದರು.

ನಾಲ್ಕು ಕಡೆ ಕೃತ್ಯ: ‘ಆರೋಪಿ ಅರ್ಬಾಜ್, ನಗರದ ನಾಲ್ಕು ಕಡೆಗಳಲ್ಲಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಕೆ.ಜಿ.ಹಳ್ಳಿಯಲ್ಲಿ ಸಿಗರೇಟ್‌ ಮಳಿಗೆಯೊಂದಕ್ಕೆ ಹೋಗಿ ಕೆಲಸಗಾರನಿಗೆ ಚಾಕುವಿನಿಂದ ಇರಿದಿದ್ದ. ಎಚ್‌ಬಿಆರ್‌ ಲೇಔಟ್‌ನಲ್ಲಿ ಸಾರ್ವಜನಿಕರೊಬ್ಬರನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ನಗದು ಸುಲಿಗೆ ಮಾಡಿದ್ದ’ ಎಂದು ಶರಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT