ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru | ಗಸ್ತು ತಿರುಗದ ಹೊಯ್ಸಳ ಪೊಲೀಸರು: ಸುಲಿಗೆ, ಹಲ್ಲೆ ಹೆಚ್ಚಳ

* ಪತ್ರಿಕಾ ವಿತರಕರಿಗೆ ಚಾಕು ಇರಿತ * ನಗದು, ಮೊಬೈಲ್ ಕಿತ್ತೊಯ್ಯುವ ದುಷ್ಕರ್ಮಿಗಳು
Published 4 ನವೆಂಬರ್ 2023, 0:34 IST
Last Updated 4 ನವೆಂಬರ್ 2023, 0:34 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿನಗರ ಠಾಣೆ ವ್ಯಾಪ್ತಿಯ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿ ಪತ್ರಿಕಾ ವಿತರಕ ಆಂಥೋನಿ ಸಿ. (75) ಅವರನ್ನು ಅಡ್ಡಗಟ್ಟಿ ತೊಡೆಗೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲಸೂರು ಠಾಣೆ ವ್ಯಾಪ್ತಿಯ ಸರಸ್ವತಿಪುರದಲ್ಲಿ ಪತ್ರಿಕಾ ವಿತರಕರೊಬ್ಬರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಪೊಲೀಸರು ಸಮರ್ಪಕವಾಗಿ ಗಸ್ತು ತಿರುಗುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿದೆ.

‘ಲಿಂಗರಾಜಪುರ ಬಳಿಯ ಥಾಮಸ್ ಟೌನ್‌ನ ನಿವಾಸಿ ಆಂಥೋನಿ, ಹಲವು ವರ್ಷಗಳಿಂದ ಪತ್ರಿಕೆಗಳ ವಿತರಣೆ ಮಾಡುತ್ತಿದ್ದಾರೆ. ಶುಕ್ರವಾರ (ನ.3) ಬೆಳಿಗ್ಗೆ 4.30 ಗಂಟೆ ಸುಮಾರಿಗೆ ಪತ್ರಿಕೆ ಹಂಚಲೆಂದು ಮನೆಯಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಪತ್ರಿಕೆ ವಿತರಣೆ ಹುಡುಗರಿಗೆ ಕರೆ ಮಾಡಲು ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಸ್ಥಳಕ್ಕೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಹಣಕ್ಕಾಗಿ ಒತ್ತಾಯಿಸಿದ್ದರು. ಹಣ ನೀಡದಿದ್ದಕ್ಕೆ ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ’ ಎಂದು ಸಹೋದ್ಯೋಗಿಗಳು ಹೇಳಿದರು.

ಸಿಬಿಡಿಯಲ್ಲಿ ಸುಲಿಗೆ, ಹಲ್ಲೆ ಹೆಚ್ಚಳ:

ವಿಧಾನಸೌಧದ ಸುತ್ತಮುತ್ತಲಿನ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಸುಲಿಗೆ ಹಾಗೂ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಿತ್ಯವೂ ತಡರಾತ್ರಿ ಹಾಗೂ ನಸುಕಿನಲ್ಲಿ ರಸ್ತೆಯಲ್ಲಿ ಹೋಗುವವರನ್ನು ಅಡ್ಡಗಟ್ಟುತ್ತಿರುವ ದುಷ್ಕರ್ಮಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸುತ್ತಿದ್ದಾರೆ. ಮೊಬೈಲ್, ನಗದು ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಾಕುವಿನಿಂದ ಇರಿದು ಕೊಲೆಗೂ ಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗಿವೆ’ ಎಂದು ಸ್ಥಳೀಯರು ದೂರಿದರು.

‘ಅಶೋಕನಗರ, ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಹಲಸೂರು, ಕೆ.ಜಿ.ಹಳ್ಳಿ, ಬಾಣಸವಾಡಿ ಹಾಗೂ ಸುತ್ತಮುತ್ತಲಿನ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂತ್ರಸ್ತರು ದೂರು ನೀಡುತ್ತಿದ್ದು, ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ಮೌನವಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ. ಜೊತೆಗೆ, ಅಪರಾಧ ನಡೆಯುವ ಸ್ಥಳಗಳನ್ನು ಗುರುತಿಸಿ ಗಸ್ತು ಹೆಚ್ಚಿಸುವ ಬಗ್ಗೆಯೂ ಗಮನ ಹರಿಸಿಲ್ಲ’ ಎಂದು ಸ್ಥಳೀಯರು ದೂರಿದರು.

ನಿತ್ಯವೂ ನಸುಕಿನಲ್ಲಿ ಆಗುತ್ತಿರುವ ಸುಲಿಗೆ ಹಾಗೂ ಹಲ್ಲೆ ಪ್ರಕರಣಗಳು ಗಮನಕ್ಕೆ ಬಂದಿವೆ. ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಅಪರಾಧಗಳು ಮರುಕಳಿಸದಂತೆ ಗಸ್ತು ಹೆಚ್ಚಿಸಲಾಗುವುದು.

-ಡಿ. ದೇವರಾಜ್ ಪಶ್ವಿಮ ವಿಭಾಗದ ಡಿಸಿಪಿ

ಪತ್ರಿಕೆ ಹಂಚುವವರ ಮೇಲೆ ಹಲ್ಲೆ 

‘ಪತ್ರಿಕಾ ವಿತರಕರು ನಿತ್ಯವೂ ನಸುಕಿನ 3 ಗಂಟೆಯಿಂದಲೇ ಮನೆ ಮನೆಗೆ ಪತ್ರಿಕೆ ಹಂಚಲು ತೆರಳುತ್ತಿದ್ದಾರೆ. ಪತ್ರಿಕಾ ವಿತರಕರನ್ನು ರಸ್ತೆಯಲ್ಲಿ ಅಡ್ಡಗಟ್ಟುತ್ತಿರುವ ದುಷ್ಕರ್ಮಿಗಳು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ಹೇಳಿದರು. ‘ಪತ್ರಿಕಾ ವಿತರಕರ ಮೇಲೆ ನಡೆದ ಹಲ್ಲೆ ಬಗ್ಗೆ ಹಲಸೂರು ಹಾಗೂ ಶಿವಾಜಿನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಆದರೆ ಇದುವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ’ ಎಂದು ದೂರಿದರು. ಲಾಂಗ್‌ ತೋರಿಸಿ ಸುಲಿಗೆ: ಹಲಸೂರು ಬಳಿಯ ಸರಸ್ವತಿಪುರದಲ್ಲಿ ದ್ವಿಚಕ್ರ ವಾಹನದಲ್ಲಿ ಅ.17ರಂದು ಹೊರಟಿದ್ದ ಪತ್ರಿಕಾ ವಿತರಕ ವೆಂಕಟೇಶ್‌ ಪ್ರಸಾದ್ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಈ ಬಗ್ಗೆಯೂ ದೂರು ದಾಖಲಾಗಿದ್ದು ಇದುವರೆಗೂ ಆರೋಪಿಗಳ ಬಂಧನವಾಗಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT