ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪದಡಿ ರೌಡಿ ಸೇರಿ ಇಬ್ಬರನ್ನು ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರೌಡಿ ಮನೋಜ್ ಅಲಿಯಾಸ್ ಕೆಂಚ (25) ಹಾಗೂ ಈತನ ಸಹಚರ ಪ್ರಮೋದ್ ಬಂಧಿತರು. ಹರಿಪ್ರಸಾದ್ ಅವರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮನೋಜ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಪ್ರಮೋದ್ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ ಸೇರಿದಂತೆ ವಿವಿಧ ಆರೋಪದಡಿ ಮನೋಜ್ ವಿರುದ್ಧ 12 ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಈತ, ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ’ ಎಂದು ತಿಳಿಸಿದರು.
‘ಚಿಕ್ಕಬೊಮ್ಮಸಂದ್ರದ ಕೆನರಾ ಬ್ಯಾಂಕ್ ಬಳಿ ಹೊರಟಿದ್ದ ಹರಿಪ್ರಸಾದ್ ಅವರನ್ನು ಜುಲೈ 16ರಂದು ರಾತ್ರಿ ಅಪಹರಣ ಮಾಡಿದ್ದ ಆರೋಪಿಗಳು, ಹಣ ಸುಲಿಗೆ ಮಾಡಿದ್ದರು. ಜೀವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.