ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ಮೇಲ್ವಿಚಾರಣೆಗೆ ರೋಬೊ: ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಅಳವಡಿಕೆ

ವಾರ್ಡ್‌ಗಳಿಗೆ ತೆರಳದೆಯೂ ರೋಗಿಗಳ ನಿರ್ವಹಣೆ
Published 15 ಜುಲೈ 2023, 23:55 IST
Last Updated 15 ಜುಲೈ 2023, 23:55 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮೇಲ್ವಿಚಾರಣೆಗೆ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯು (ಆರ್‌ಜಿಐಸಿಡಿ) ಟೆಲಿ ರೋಬೊ ಅಳವಡಿಸಿಕೊಂಡಿದೆ. ಇದರಿಂದಾಗಿ ವಾರ್ಡ್‌ಗಳಿಗೆ ತೆರಳದೆಯೂ ರೋಗಿಗಳ ನಿರ್ವಹಣೆ ವೈದ್ಯರಿಗೆ ಸಾಧ್ಯವಾಗಿದೆ. 

ನಗರದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡಾಗ ಸಂಸ್ಥೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೋಷಿಸಿ, ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಇಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಪ್ರಾಯೋಗಿಕವಾಗಿ ಈ ಟೆಲಿ ರೋಬೊವನ್ನು ಬಳಸಿಕೊಳ್ಳಲಾಗಿತ್ತು. ಉತ್ತಮ ಫಲಿತಾಂಶ ದೊರೆತ ಪರಿಣಾಮ ಈಗ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಈ ರೋಬೊ ವ್ಯವಸ್ಥೆಗೆ ₹ 30 ಲಕ್ಷ ವೆಚ್ಚ ಮಾಡಲಾಗಿದೆ. ಇದರ ನಿರ್ವಹಣೆಗೆ ನಿಯಂತ್ರಣ ಕೊಠಡಿ (ಕಮಾಂಡ್ ಸೆಂಟರ್) ನಿರ್ಮಿಸಲಾಗಿದ್ದು, ಇದರ ಮೂಲಕವೇ ರೋಬೊವನ್ನು ನಿಯಂತ್ರಿಸಲಾಗುತ್ತಿದೆ. 

ಸಂಸ್ಥೆಯಲ್ಲಿ 60 ಐಸಿಯು ಹಾಸಿಗೆಗಳಿವೆ. ಟೆಲಿ ರೋಬೊ ಅನ್ನು ಒಂದು ಹಾಸಿಗೆಯಿಂದ ಇನ್ನೊಂದು ಹಾಸಿಗೆಗೆ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ವೈದ್ಯರು ರೋಬೊ ನೆರವಿನಿಂದ ರೋಗಿಗಳೊಂದಿಗೆ ಸಂವಹನ ನಡೆಸಬಹುದಾಗಿದೆ. ರೋಬೊ ಮೇಲೆ ನಿಗಾ ಇರಿಸಲು ನಿಯಂತ್ರಣ ಕೊಠಡಿಯಲ್ಲಿ ಬೃಹತ್ ಪರದೆಯನ್ನೂ ಅಳವಡಿಸಲಾಗಿದೆ. ಇದರಿಂದಾಗಿ ರೋಬೊ ಕಾರ್ಯವಿಧಾನ ವೀಕ್ಷಿಸುತ್ತಾ, ಸೂಚನೆಗಳನ್ನು ನೀಡಲು ಸಾಧ್ಯವಾಗಿದೆ. ಅದೇ ರೀತಿ, ರೋಬೊ ನೆರವಿನಿಂದ ರೋಗಿಯ ದತ್ತಾಂಶವನ್ನು ಸಂಗ್ರಹಿಸಿ, ವಿಶ್ಲೇಷಿಸಲು ಸಹಕಾರಿಯಾಗಿದೆ.

ರೋಗಿಗಳ ಮೇಲೆ ನಿಗಾ: ಈ ರೋಬೊ ವ್ಯವಸ್ಥೆಯಿಂದ ರೋಗಿಗಳ ಮೇಲೆ ನಿರಂತರ ನಿಗಾ ಸಾಧ್ಯವಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕೆಲಸವನ್ನೂ ರೋಬೊ ಸುಲಭಗೊಳಿಸಿದೆ. ವಾರ್ಡ್‌ಗಳನ್ನು ಸೋಂಕು ಮುಕ್ತಗೊಳಿಸಲು ಇದು ಸಹಕಾರಿಯಾಗಿದೆ. 

ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಸಂಸ್ಥೆಯ ಹಿಂಭಾಗ ತಾತ್ಕಾಲಿಕ ಆಸ್ಪತ್ರೆ (ಮೇಕ್‌ ಶಿಫ್ಟ್) ನಿರ್ಮಿಸಲಾಗಿತ್ತು. 200 ಹಾಸಿಗೆಗಳ ಮೇಕ್‌ ಶಿಫ್ಟ್ ಆಸ್ಪತ್ರೆಯನ್ನೂ ಈಗ ಎದೆ ರೋಗಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. 

ಅಂಕಿ–ಅಂಶಗಳು 

470 ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ

200–250 ಆಸ್ಪತ್ರೆಗೆ ದಿನದಲ್ಲಿ ಭೇಟಿ ನೀಡುವ ಹೊರರೋಗಿಗಳ ಸರಾಸರಿ ಸಂಖ್ಯೆ

170–180 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸರಾಸರಿ ಒಳರೋಗಿಗಳು

30 ಆಸ್ಪತ್ರೆಯಲ್ಲಿ ಲಭ್ಯ ಇರುವ ತಜ್ಞ ವೈದ್ಯರು

ಕೋವಿಡ್ ಸಂದರ್ಭದಲ್ಲಿ ರೋಬೊ ಬಳಸಿಕೊಳ್ಳಲಾಗಿತ್ತು. ಅದು ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದರಿಂದಾಗಿ ಇತರ ರೋಗಿಗಳ ನಿಗಾಕ್ಕೆ ಬಳಸಿಕೊಳ್ಳಲಾಗುತ್ತಿದೆ

-ಡಾ.ಸಿ. ನಾಗರಾಜ್ ಆರ್‌ಜಿಐಸಿಡಿ ನಿರ್ದೇಶಕ

ಫಿಸಿಯೋಥೆರಪಿ ಕೇಂದ್ರ ಶ್ವಾಸಕೋಶ ತೊಂದರೆ ಇರುವವರಿಗೆ ಸಮಸ್ಯೆ ನಿವಾರಣೆಗೆ ಸಂಸ್ಥೆಯಲ್ಲಿ ‘ಮಾಡರ್ನ್ ಚೆಸ್ಟ್ ಫಿಸಿಯೋಥೆರಪಿ’ ಕೇಂದ್ರ ಪ್ರಾರಂಭಿಸಲಾಗಿದೆ. ಇದನ್ನು ಸರ್ಕಾರದ ಅನುದಾನ ಹಾಗೂ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಶ್ವಾಸಕೋಶ ತೊಂದರೆ ಹೊಂದಿರುವ ರೋಗಿಗಳಿಗೆ ಅಗತ್ಯವಾದ ಫಿಸಿಯೋಥೆರಪಿ ಚಿಕಿತ್ಸೆ ನೀಡುವ ಮೂಲಕ ಕಾಯಿಲೆಯ ತೀವ್ರತೆಯನ್ನು ತಗ್ಗಿಸಿ ಶ್ವಾಸಕೋಶ ಪುನರ್ವಸತಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT