‘ಬಾಲ ಬಿಚ್ಚಿದರೆ ಹುಷಾರ್‌.. ರೌಡಿಗಳಿಗೆ ಎಚ್ಚರಿಕೆ’

ಗುರುವಾರ , ಜೂಲೈ 18, 2019
22 °C

‘ಬಾಲ ಬಿಚ್ಚಿದರೆ ಹುಷಾರ್‌.. ರೌಡಿಗಳಿಗೆ ಎಚ್ಚರಿಕೆ’

Published:
Updated:

ಬೆಂಗಳೂರು: ಅಪರಾಧ ಚಟುವಟಿಕೆ‌ಯಲ್ಲಿ ಭಾಗಿಯಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಪಶ್ಚಿಮ ವಿಭಾಗದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ರೌಡಿಗಳ ಮನೆಗಳ ಮೇಲೆ ರಮೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, ರೌಡಿಗಳನ್ನು ಭಾನುವಾರ ಬೆಳಿಗ್ಗೆ ಫ್ರೀಡಂ ಪಾರ್ಕ್‍ಗೆ ಕರೆದುಕೊಂಡು ಬಂದು ಪರೇಡ್ ನಡೆಸಿದರು.

ಪರೇಡ್‍ನಲ್ಲಿ ರೌಡಿಗಳಾದ ಗೊರಿಲ್ಲ ಅಲಿಯಾಸ್ ಶ್ರೀಧರ್, ತಿರುಮಲ ಅಲಿಯಾಸ್ ತಿಮ್ಮ, ಪುನೀತ್ ಅಲಿಯಾಸ್ ಚಿಕ್ಕ, ಧರಣಿ ಸೇರಿ ಅಪರಾಧ ಹಿನ್ನೆಲೆಯುಳ್ಳ 200ಕ್ಕೂ ಹೆಚ್ಚು ರೌಡಿಗಳಿಗೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದೆ, ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತೆ ಕಿವಿಮಾತು ಕೇಳಿದರು.

‘ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಗೊತ್ತಾದರೆ ಕಠಿಣ ಕ್ರಮಕೈಗೊಳ್ಳುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದ ಡಿಸಿಪಿ, ‘ಸದ್ಯ ಏನು ಕೆಲಸ ಮಾಡುತ್ತಿದ್ದೀರಿ’ ಎಂದು ರೌಡಿಗಳನ್ನು ಪ್ರಶ್ನಿಸಿದರು.

ಆಯಾ ವಿಭಾಗದ ಎಸಿಪಿಗಳು, ಇನ್‍ಸ್ಪೆಕ್ಟರ್‌ಗಳು ಮತ್ತು ಪೊಲೀಸ್ ಸಿಬ್ಬಂದಿ ರೌಡಿಗಳ ಮನೆ ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ ಸೇರಿ ಇತರ ಮಾಹಿತಿ ಪಡೆದುಕೊಂಡರು.

ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡುವಂತೆ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಇತ್ತೀಚೆಗೆ ಸೂಚಿಸಿದ್ದರು. ಅದರಂತೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !