ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿ ಹತ್ಯೆಗೆ ಸಂಚು | ಸಹಚರರಿಂದ ರೌಡಿ ಕೊಲೆ: 12 ಮಂದಿ ಬಂಧನ

ಬಾಣಸವಾಡಿ ಪೊಲೀಸರ ಕಾರ್ಯಾಚರಣೆ- ರೌಡಿಗಳು ಸೇರಿ 12 ಮಂದಿ ಬಂಧನ
Published 28 ಮಾರ್ಚ್ 2024, 15:27 IST
Last Updated 28 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ದಿನೇಶ್‌ಕುಮಾರ್ ಅಲಿಯಾಸ್ ಕೇರಂ (34) ಹತ್ಯೆ ಪ್ರಕರಣದಲ್ಲಿ ರೌಡಿಗಳು ಸೇರಿ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ದೇವರ ಜೀವನಹಳ್ಳಿಯ (ಡಿ.ಜಿ.ಹಳ್ಳಿ) ಆನಂದಪುರದ ದಿನೇಶ್‌ನನ್ನು ಕಮ್ಮನಹಳ್ಳಿ ಬಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಾರ್ಚ್ 27ರಂದು ಹತ್ಯೆ ಮಾಡಲಾಗಿತ್ತು. ತನಿಖೆ ಕೈಗೊಂಡು, 12 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರೌಡಿಗಳಾದ ದಿಲೀಪ್‌ ಸಾಗರ್ ಅಲಿಯಾಸ್ ಸ್ಪೀಡ್, ಅಜಯ್ ಕ್ರಿಸ್ಟೊಫರ್, ಅರವಿಂದ್, ನಿಖಿಲ್ ಅಲಿಯಾಸ್ ವಿಕ್ಕಿ, ಗೌತಮ್, ದರ್ಶನ್, ಮೆಲ್ವಿನ್, ಕಾರ್ತಿಕ್, ಸತೀಶ್, ಕಿಶೋರ್, ದಿವಾಕರ್ ಹಾಗೂ ಶೇಖರ್ ಬಂಧಿತರು’ ಎಂದು ತಿಳಿಸಿದರು.

ರೌಡಿಗಳ ನಡುವೆ ವೈಷಮ್ಯ:

‘ಸುಲಿಗೆ, ದರೋಡೆಗೆ ಯತ್ನ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಿನೇಶ್‌ಕುಮಾರ್ ಆರೋಪಿಯಾಗಿದ್ದ. ಕಮರ್ಷಿಯಲ್ ಸ್ಟ್ರೀಟ್ ಹಾಗೂ ಜೆ.ಸಿ.ನಗರ ಠಾಣೆಗಳ ರೌಡಿ ಪಟ್ಟಿಯಲ್ಲಿ ದಿನೇಶ್‌ಕುಮಾರ್ ಹೆಸರಿತ್ತು’ ಎಂದು ಪೊಲೀಸರು ಹೇಳಿದರು.

‘ರೌಡಿ ದಿಲೀಪ್‌ ಸಾಗರ್ ವಿರುದ್ಧವೂ ಹಲವು ಪ್ರಕರಣಗಳು ದಾಖಲಾಗಿದ್ದವು. ದಿನೇಶ್ ಹಾಗೂ ದಿಲೀಪ್‌ ಸಾಗರ್ ನಡುವೆ ಹಲವು ವರ್ಷಗಳಿಂದ ವೈಷಮ್ಯವಿತ್ತು. ಮಾರಾಮಾರಿಯೂ ನಡೆದಿತ್ತು. ಇದೇ ವೈಷಮ್ಯದಿಂದ ದಿನೇಶ್ ಕೊಲೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.

ನಂಬಿದ್ದ ಸಹಚರರಿಂದಲೇ ಹತ್ಯೆ:

‘ದಿಲೀಪ್‌ ಸಾಗರ್‌ ಹತ್ಯೆ ಮಾಡಲು ಸಂಚು ರೂಪಿಸಿದ್ದ ದಿನೇಶ್, ತನ್ನ ಸಹಚರರಿಗೆ ವಿಷಯ ತಿಳಿಸಿದ್ದ. ಎಲ್ಲರೂ ಸೇರಿ ದಿಲೀಪ್‌ನನ್ನು ಕೊಲೆ ಮಾಡೋಣವೆಂದು ದಿನೇಶ್‌ ಹೇಳಿದ್ದ. ಈ ಸಂಗತಿ ದಿಲೀಪ್‌ಗೆ ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

‘ದಿನೇಶ್‌ ಸಹಚರರನ್ನೇ ತನ್ನತ್ತ ಸೆಳೆದಿದ್ದ ದಿಲೀಪ್, ಹಲವು ಆಮಿಷವೊಡ್ಡಿದ್ದ. ದಿನೇಶ್‌ನನ್ನೇ ಕೊಲೆ ಮಾಡುವಂತೆ ಅವರಿಗೆ ಸೂಚನೆ ಕೊಟ್ಟಿದ್ದ. ಮಾರ್ಚ್ 27ರಂದು ದಿನೇಶ್ ಹಾಗೂ ಸಹಚರರು, ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಸಹಚರರು ಹಾಗೂ ದಿಲೀಪ್‌ ಕಡೆಯವರು, ದಿನೇಶ್‌ನನ್ನು ಕೊಂದು ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಐದು ತಂಡಗಳು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಬಂಧಿತರಲ್ಲಿ ಕೆಲವರು, ಮೃತ ದಿನೇಶ್‌ ಸಹಚರರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT