ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ: ಬಿಜೆಪಿಯತ್ತ ವಿಪಕ್ಷ ಮುಖಂಡರು

ಬಿಬಿಎಂಪಿ ಮಾಜಿ ಸದಸ್ಯರ ವಲಸೆ
Last Updated 18 ಅಕ್ಟೋಬರ್ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ, ಕ್ಷೇತ್ರದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಹಲವು ಮುಖಂಡರು ಸಾಮೂಹಿಕವಾಗಿ ಬಿಜೆಪಿಗೆ ವಲಸೆ ಹೋಗಿದ್ದಾರೆ. ಮಾಜಿ ಮೇಯರ್‌ ನಾರಾಯಣಸ್ವಾಮಿ ಸೇರಿದಂತೆ 12 ಮುಖಂಡರು ಭಾನುವಾರ ಬಿಜೆಪಿ ಸೇರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉಪಸ್ಥಿತಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶ್ರೀನಿವಾಸಮೂರ್ತಿ, ಜಿ.ಕೆ. ವೆಂಕಟೇಶ್‌, ಆಶಾ ಸುರೇಶ್‌, ವೇಲು ನಾಯ್ಕರ್‌, ಮಂಜುಳಾ ನಾರಾಯಣಸ್ವಾಮಿ, ಸಿದ್ದೇಗೌಡ, ಮೋಹನ್‌ಕುಮಾರ್‌, ವೆಂಕಟೇಶ್‌ ಬಾಬು, ಗೋವಿಂದರಾಜು, ರಾಮಚಂದ್ರ, ನಗರಸಭೆಯ ಮಾಜಿ ಸದಸ್ಯ ಕಮಲೇಶ್‌ ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿ ಸದಸ್ಯತ್ವ ಪಡೆದರು.

ಡೈನಮೈಟ್‌ ಸಿಕ್ಕಿವೆ: ಕಾಂಗ್ರೆಸ್‌, ಜೆಡಿಎಸ್‌ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ‘ಕನಕಪುರ ಸೇರಿದಂತೆ ಎಲ್ಲೆಲ್ಲಿಂದಲೋ ಬಂದವರು ಆರ್‌.ಆರ್‌. ನಗರದಲ್ಲಿ ಗೂಂಡಾಗಿರಿಯ ರಾಜಕಾರಣ ಮಾಡಲು ಈ ಬಾರಿ ಬಿಡುವುದಿಲ್ಲ. ಸ್ವಾಮಿ, ನಿಮ್ಮ ಬಳಿ ಬಂಡೆ ಇರಬಹುದು. ಕಾಂಗ್ರೆಸ್‌ನಿಂದ ಬಂದ ಡೈನಮೈಟ್‌ಗಳು ನಮ್ಮ ಬಳಿ ಇವೆ. ಬಂಡೆಯನ್ನು ಪುಡಿ ಮಾಡಲಿವೆ’ ಎಂದರು.

‘ಕಾಂಗ್ರೆಸ್‌ ನಾಯಕರು ಈಗ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ತಿಹಾರ್‌ ಜೈಲಿನಲ್ಲಿದ್ದಾಗ ನೀವು ಇತಿಹಾಸ ಓದಿದಿರಾ? ಅಥವಾ ಇತಿಹಾಸ ಬರೆದಿರಾ? ಜೈಲಿಗೆ ಹೋಗುವಾಗ, ಬರುವಾಗ, ಕುಳಿತಾಗ, ನಿಂತಾಗ ಮೆರವಣಿಗೆ ಮಾಡುತ್ತೀರಿ. ನಿಮ್ಮನ್ನು ಮನೆಯಲ್ಲೇ ಕೂರಿಸಲು ಜನರು ತೀರ್ಮಾನಿಸಿದ್ದಾರೆ’ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಅವರು ನಾವೇ ಅಭ್ಯರ್ಥಿಗಳೆಂದು ಪರಿಗಣಿಸಿ ಮತ ನೀಡಿ ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಅವರೇ ಅವಮಾನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ ಇಲ್ಲಿ ಕಡಿಮೆ ಮತ ಗಳಿಸಿದ್ದರು ಎಂಬುದು ಅವರಿಗೆ ನೆನಪಿರಲಿ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಅಭ್ಯರ್ಥಿ ಮುನಿರತ್ನ, ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಇದ್ದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ

ಆರ್‌.ಆರ್‌. ನಗರ ಕ್ಷೇತ್ರದ ವ್ಯಾಪ್ತಿಯ ಲಗ್ಗೆರೆಯ ಬಿಜೆಪಿ ಮುಖಂಡ ಎಂ.ಎನ್. ಗಂಗಾಧರ್ ನೇತೃತ್ವದಲ್ಲಿ ಅವರ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಭಾನುವಾರ ಕಾಂಗ್ರೆಸ್‌ ಸೇರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ಕೂಡಾ ಇದ್ದರು.

ಅಹವಾಲು ಆಲಿಸಿದ ಡಿಕೆಶಿ: ಆರ್‌.ಆರ್‌. ನಗರದಲ್ಲಿ ಪಕ್ಷದ ಅಭ್ಯರ್ಥಿ ಜೊತೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾಗರಬಾವಿಯ ಮಡಿವಾಳರ ಅಂಗಡಿಗೆ ಭೇಟಿ ನೀಡಿ ಅಂಗಡಿ ಮಾಲೀಕನ ಅಹವಾಲು ಆಲಿಸಿದರು.

‘ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಘೋಷಿಸಿದ ಪರಿಹಾರದಲ್ಲಿ ಒಂದು ಪೈಸೆ ಕೂಡ ಸಿಕ್ಕಿಲ್ಲ. ಈ ಘೋಷಣೆ ಕೇವಲ ಘೋಷಣೆಯಾಗಿ ಉಳಿಯಿತು’ ಎಂದು ಅಂಗಡಿ ಮಾಲೀಕ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT