ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ ಗೂಂಡಾಗಿರಿ: ‘ಕೈ’ ನಾಯಕರಿಗೆ ಈಗ ಜ್ಞಾನೋದಯ: ಎಚ್‌ಡಿಕೆ ವ್ಯಂಗ್ಯ

Last Updated 9 ಅಕ್ಟೋಬರ್ 2020, 16:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್‌.ಆರ್‌.ನಗರ) ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಗೂಂಡಾಗಿರಿ, ಬೇರೆ ಪಕ್ಷದ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಈಗ ಜ್ಞಾನೋದಯವಾಯಿತೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಆರ್‌.ಆರ್‌.ನಗರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಎಫ್‌ಐಆರ್ ಹಾಕಿಸುವ ಕೆಲಸ ನಡೆಯುತ್ತಿದೆ. ಅಂತಹ ಅಧಿಕಾರಿಗಳನ್ನು ಅಮಾನತ್ ಮಾಡಿಸುವವರೆಗೆ ಹೋರಾಟ ಮಾಡುವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗುರುವಾರ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಗೂಂಡಾಗಿರಿ ಸಂಸ್ಕೃತಿ, ಅಧಿಕಾರ ದುರುಪಯೋಗ, ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಕೆಲಸ ಮೊದಲಿನಿಂದಲೂ ಇತ್ತು. ಈ ಸಂಸ್ಕೃತಿ ಈಗ ಬಂದಿದೆಯೇ ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಲಿ. ಹಿಂದೆ ಅವರು (ಮುನಿರತ್ನ) ಕಾಂಗ್ರೆಸ್ ಶಾಸಕರಾಗಿದ್ದರೇ ಆಗಿದ್ದವರಲ್ಲವೇ? ಆಗ ಪ್ರೇರಣೆ ನೀಡಿದ್ದು, ಬೆಂಬಲಕ್ಕೆ ನಿಂತಿದ್ದು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಜನರ ಮುಂದಿಡಲಿ ಎಂದು ಕುಟುಕಿದರು.

ಅಧಿಕಾರಿಗಳನ್ನು ಅಮಾನತ್ ಮಾಡಿಸುವವರೆಗೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಈಗ ಹೇಳುವ ಬದಲು, ಅಂತಹ ದಬ್ಬಾಳಿಕೆ ಸಂಸ್ಕೃತಿ ಸ್ಥಾಪಿಸಿದಾಗಲೇ ತಡೆಯಬೇಕಿತ್ತು. ಅಂದು ಗಾಜಿನ ಮನೆಯಲ್ಲಿ ಕುಳಿತುಕೊಂಡು ಮತ್ತೊಂದು ಗಾಜಿನ ಮನೆಯತ್ತ ಕಲ್ಲು ಎಸೆದವರು ಯಾರು? ಈಗ ಏಕೆ ಜ್ಞಾನೋದಯವಾಗಿದೆ. ಚುನಾವಣೆ ಹೊತ್ತಿಗೆ ಜನರನ್ನು ದಿಕ್ಕುತಪ್ಪಿಸಲು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

ಈಗ ಜಾತಿ ರಾಜಕಾರಣ ಮಾಡುತ್ತಿರುವವರು ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಒಂದು ಜಾತಿಯ ಮೇಲೆ ದಬ್ಬಾಳಿಕೆ ನಡೆದಾಗ, ಜಾತಿಯವರನ್ನು ವಿರೋಧಿಸಿದಾಗ ಅದನ್ನು ತಡೆಯಲು ಮುಂದೆ ಬಂದಿದ್ದರಾ? ಈಗ ಜಾತಿರಕ್ಷಕರಾಗಿದ್ದು ಏಕೆ? ಹಿಂದೆಲ್ಲ ದೌರ್ಜನ್ಯ ನಡೆಸಿದಾಗ ತಡೆಯೊಡ್ಡಲು ಕ್ರಮ ಕೈಗೊಂಡಿದ್ದರೆ ಈಗ ನಮ್ಮವರು ಒಂದಾಗಬೇಕು ಎಂದು ಹೇಳುವ ಅಗತ್ಯ ಇರಲಿಲ್ಲ. ರಾಜಕಾರಣಕ್ಕೆ ಬೇಕಾದಂತೆ ಹೇಳಿಕೆ ತಿರುಚುವುದನ್ನು ಬಿಟ್ಟು ನೇರ ರಾಜಕಾರಣ ಮಾಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT