ಗುರುವಾರ , ನವೆಂಬರ್ 26, 2020
21 °C
ಆರ್‌.ಆರ್‌.ನಗರ ಉಪಚುನಾವಣೆ

512 ಮಂದಿಗೆ ಮತಗಟ್ಟೆಗೆ ಹೋಗದೆಯೇ ಮತ ಹಾಕುವ ಅವಕಾಶ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ಮನೆಯಿಂದಲೇ ಕೆಲಸ (ವರ್ಕ್‌ ಫ್ರಂ ಹೋಮ್‌) ಎಂಬ ಪದ ಜನಜನಿತ. ಕಚೇರಿಗೆ ಹೋಗದೇ ಮನೆಯಿಂದಲೇ ಕೆಲಸ ಮಾಡಿದಂತೆಯೇ, ಈ ಬಾರಿ ರಾಜರಾಜೇಶ್ವರಿ ನಗರ ಕ್ಷೇತ್ರ ಉಪ ಚುನಾವಣೆಯಲ್ಲಿ 512 ಮಂದಿಗೆ ಮತಗಟ್ಟೆಗೆ ಹೋಗದೆಯೇ ಮತದಾನ ಮಾಡುವ ಅವಕಾಶ ಲಭಿಸಿದೆ.

ಇಷ್ಟರವರೆಗೆ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಮಾತ್ರ ಅಂಚೆ ಮತದ ಅವಕಾಶ ಲಭಿಸುತ್ತಿತ್ತು. ಆದರೆ, ಈ ಬಾರಿ ಚುನಾವಣಾ ಸಿಬ್ಬಂದಿಯಲ್ಲದವರಿಗೂ ಈ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಮತದಾನ ಪ್ರಕ್ರಿಯೆ ಹೇಗೆ ನಡೆಸಬೇಕು ಎಂಬ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ಸಲಹೆ ಸೂಚನೆಗಳನ್ನು ನೀಡಿದೆ. ಕೋವಿಡ್‌ ಇರುವವರಿಗೆ, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೂ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆರ್‌.ಆರ್‌.ನಗರ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 489 ಹಿರಿಯ ನಾಗರಿಕರು ಹಾಗೂ 23 ಅಂಗವಿಕಲರಿಗೆ ಅಂಚೆ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ.

‘ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾದ ಐದು ದಿನಗಳ ವರೆಗೆ ಅಂಚೆ ಮತದಾನಕ್ಕಾಗಿ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದಲ್ಲದೇ ಮತದಾರರ ಪಟ್ಟಿ ನೋಡಿ 80 ವರ್ಷ ಮೀರಿದ ಮತದಾರರು ಎಷ್ಟು ಮಂದಿ ಇದ್ದಾರೆ ಎಂಬ ಪಟ್ಟಿಯನ್ನು ನಾವೂ ಸಿದ್ಧಪಡಿಸಿಕೊಂಡಿದ್ದೆವು. ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಇಂತಹ ಮತದಾರರನ್ನು ಸಂಪರ್ಕಿಸಿ ಈ ಅವಕಾಶದ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ 512 ಮಂದಿ ಅಂಚೆ ಮತದಾನಕ್ಕೆ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ’ ಎಂದು ಬಿಬಿಎಂಪಿ ಚುನಾವಣಾ ಶಾಖೆಯು ಸಹಾಯಕ ಆಯುಕ್ತರಾದ ವೈ.ಕವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಎಲ್‌ಒಗಳು ಮತಪತ್ರವನ್ನು ಇವರ ಮನೆಗೆ ತಲುಪಿಸುತ್ತಾರೆ. ಮತ ಚಲಾಯಿಸುವಾಗ ‍ಪಾಲಿಸಬೇಕಾದ ಗೋಪ್ಯತೆ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಪ್ರಕ್ರಿಯೆಯ ವಿಡಿಯೊ ದಾಖಲೀಕರಣವನ್ನು ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕೋವಿಡ್‌ ಇರುವವರಿಗೆ ಇಲ್ಲ ಅಂಚೆ ಮತ’

ಚುನಾವಣಾ ಆಯೋಗವು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 60 (ಸಿ) ಅನ್ವಯ ಕೋವಿಡ್‌ ಇರುವವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡುವಂತೆ ಸೂಚನೆ ನೀಡಿತ್ತು. ಆದರೆ, ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಕೋವಿಡ್‌ ಇರುವ ಯಾರಿಗೂ ಅಂಚೆ ಮತದಾನಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಕಾರಣವೂ ಇದೆ.

‘ಉಪ ಚುನಾವಣೆಯ ಅಧಿಸೂಚನೆ ಅ.9ರಂದು ಪ್ರಕಟವಾಗಿದೆ. ಅಂಚೆ ಮತದಾನಕ್ಕೆ ಕೋರಿಕೆ ಸಲ್ಲಿಸಲು ಅ.13ರವರೆಗೂ ಅವಕಾಶ ಕಲ್ಪಿಸಲಾಗಿತ್ತು. ಮತದಾನದ ನಡೆಯುವುದು ನ.3ರಂದು ಅಂದರೆ ಈ ನಡುವೆ 20 ದಿನಗಳ ಕಾಲಾವಕಾಶ ಇದೆ. ಅ.13ರ ಒಳಗೆ ಕೋವಿಡ್‌ ಹೊಂದಿದ್ದರೂ ಅವರ ಕ್ವಾರಂಟೈನ್‌ ಅವಧಿ ನ.3ರ ಒಳಗೆ ಮುಗಿಯಲಿದೆ. ಹಾಗಾಗಿ ಕೋವಿಡ್‌ ಇರುವವರಿಗೆ ಅಂಚೆ ಮತದ ಅವಕಾಶ ನೀಡಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಚೆ ಮತಕ್ಕೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಕೊರೊನಾ ಸೋಂಕಿತರು ಹಕ್ಕು ಚಲಾಯಿಸುವ ಅವಕಾಶದಿಂದ ವಂಚಿತರಾಗುವುದಿಲ್ಲ. ಮತದಾನದ ಕೊನೆಯ 1 ಗಂಟೆಯಲ್ಲಿ (ಸಂಜೆ 5ರಿಂದ 6ಗಂಟೆ) ಕೋವಿಡ್‌ ಲಕ್ಷಣಗಳಿದ್ದವರಿಗೆ ಹಾಗೂ ಸೋಂಕಿತರಿಗೆ ಮತ ಚಲಾಯಿಸುವುದಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದರು.

‘ಪಿಪಿಇ ಕಿಟ್‌ ಧರಿಸುವುದು ಕಡ್ಡಾಯ’

‘ಕೊರೊನಾ ಸೋಂಕಿತರು ಮತದಾನದ ವೇಳೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ) ಧರಿಸುವುದು ಕಡ್ಡಾಯ. ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅವರು ಸ್ವಂತ ಖರ್ಚಿನಲ್ಲಿ ಪಿಪಿಇ ಕಿಟ್‌ ಖರೀದಿಸುವ ಸಾಮರ್ಥ್ಯ ಇಲ್ಲದಿದ್ದರೆ ಇದಕ್ಕಾಗಿ ಚುನಾವಣಾ ಅಧಿಕಾರಿಗಳನ್ನು ಮುಂಚಿತವಾಗಿ ಸಂಪರ್ಕಿಸಬಹುದು. ಪಿಪಿಇ ಕಿಟ್‌ ಒದಗಿಸಲು ನಾವೇ ವ್ಯವಸ್ಥೆ ಕಲ್ಪಿಸುತ್ತೇವೆ. ಸೋಂಕಿತರು ಮತದಾನ ಮಾಡುವ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗೂ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.

***

ಹಿರಿಯ ನಾಗರಿಕರು ಹಾಗೂ ಅಂಗವಿಕರು ಅಂಚೆಮತಕ್ಕೆ ನೋಂದಣಿ ಮಾಡುವುದು ಕಡ್ಡಾಯವೇನಲ್ಲ. ಅಂಚೆ ಮತಕ್ಕೆ ನೋಂದಣಿ ಮಾಡದ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ನೇರವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬಹುದು

-ಎನ್‌.ಮಂಜುನಾಥ ಪ್ರಸಾದ್‌ ಜಿಲ್ಲಾ ಚುನಾವಣಾಧಿಕಾರಿ

***

ಅಂಕಿ ಅಂಶ

4,62,201

ಆರ್‌.ಆರ್‌.ನಗರ ಕ್ಷೇತ್ರದ ಒಟ್ಟು ಮತದಾರರು

2,41,049

ಪುರುಷ ಮತದಾರರು

2,21,073

ಮಹಿಳಾ ಮತದಾರರು

79

ತೃತೀಯಲಿಂಗಿ ಮತದಾರರು

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು