ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಪಾರಿವಾಳಕ್ಕೆ ಆಹಾರ ಹಾಕಿದ್ರೆ ₹200 ದಂಡ: ಪಕ್ಷಿ ಪ್ರೇಮಿಗಳ ಆಕ್ಷೇಪ

Published 22 ಮಾರ್ಚ್ 2024, 14:50 IST
Last Updated 22 ಮಾರ್ಚ್ 2024, 14:50 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾರಿವಾಳಗಳಿಗೆ ಆಹಾರ ಹಾಕಿದ್ದಲ್ಲಿ ₹200 ದಂಡ ವಿಧಿಸಲಾಗುವುದು’ – ಇಂಥದ್ದೊಂದು ಫಲಕವನ್ನು ರೇಸ್‌ಕೋರ್ಸ್ ರಸ್ತೆಯ (ರೆಬಲ್ ಸ್ಟಾರ್ ಎಂ.ಎಚ್. ಅಂಬರೀಶ್ ರಸ್ತೆ) ಜಂಕ್ಷನ್‌ನಲ್ಲಿ ಅಳವಡಿಸಲಾಗಿದೆ. ಈ ಕ್ರಮಕ್ಕೆ ಪಕ್ಷಿ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ರೇಸ್‌ಕೋರ್ಸ್‌ ರಸ್ತೆ ಹಾಗೂ ಹರೇ ಕೃಷ್ಣ ರಸ್ತೆ ಸೇರುವ ಜಂಕ್ಷನ್‌ ಅಭಿವೃದ್ಧಿಗಾಗಿ ಹಲವು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಕುದುರೆ ಶಿಲ್ಪಗಳನ್ನು ನಿಲ್ಲಿಸಿ ಸುಸಜ್ಜಿತ ಜಂಕ್ಷನ್ ಮಾಡುವ ಕಾಮಗಾರಿ ಇದಾಗಿದೆ. ಜಂಕ್ಷನ್ ಅಭಿವೃದ್ಧಿ ಆಗುತ್ತಿರುವ ಜಾಗ ಹಲವು ವರ್ಷಗಳಿಂದ ಪಾರಿವಾಳಗಳ ತಾಣವಾಗಿದ್ದು, ನಿತ್ಯವೂ ನೂರಾರು ಪಾರಿವಾಳುಗಳು ಇಲ್ಲಿ ಕೂರುತ್ತಿವೆ.

ವಾಹನ ಚಾಲಕರು, ಬೈಕ್ ಸವಾರರು, ಸ್ಥಳೀಯ ವ್ಯಾಪಾರಿಗಳು ಹಾಗೂ ಕೆಲ ವೃದ್ಧರು–ಮಕ್ಕಳು, ನಿತ್ಯವೂ ಜಂಕ್ಷನ್‌ಗೆ ಬಂದು ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದಾರೆ. ಕುಡಿಯಲು ನೀರು ಇರಿಸುತ್ತಿದ್ದಾರೆ. ನಸುಕಿನಿಂದ ರಾತ್ರಿಯವರೆಗೂ ಆಹಾರ ಹಾಗೂ ನೀರು ಸಿಗುವುದರಿಂದ ಪಾರಿವಾಳಗಳು ಇದೇ ಸ್ಥಳದಲ್ಲಿ ಕೂರುತ್ತಿವೆ.

ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಶುರುವಾದಾಗಿನಿಂದಲೂ ಈ ಸ್ಥಳದಲ್ಲಿ ಪಾರಿವಾಳಗಳು ಕೂರುವುದು ಸಾಮಾನ್ಯವಾಗಿದೆ. ಇದೀಗ, ಕಬ್ಬಿಣದ ಕಂಬಗಳನ್ನು ನಿಲ್ಲಿಸಿ, ಕಾಂಕ್ರೀಟ್‌ ಆಸನಗಳನ್ನು ನಿರ್ಮಿಸಲಾಗಿದೆ. ಈ ಜಾಗದಲ್ಲಿ ಪಾರಿವಾಳಗಳು ಕುಳಿತರೆ ಜಂಕ್ಷನ್ ಗಲೀಜಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಗುತ್ತಿಗೆದಾರ, ಜಾಗದ ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ ಕೆಲ ಅಧಿಕಾರಿಗಳ ಸೂಚನೆಯಂತೆ ಫಲಕ ಹಾಕಿದ್ದಾರೆನ್ನುವುದು ಗೊತ್ತಾಗಿದೆ.

‘ಇಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬೇಡಿ. ಹಾಕಿದಲ್ಲಿ ₹200 ದಂಡ ವಿಧಿಸಲಾಗುವುದು’ ಎಂದು ಫಲಕದಲ್ಲಿ ಬರೆಯಲಾಗಿದೆ. ಆದರೆ, ಫಲಕದ ಮೇಲೆ ಯಾವುದೇ ಇಲಾಖೆ ಹಾಗೂ ಅಧಿಕಾರಿ ಹೆಸರು ನಮೂದು ಮಾಡಿಲ್ಲ. ಇದರ ನಡುವೆಯೇ ಕೆಲವರು ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದಾರೆ. ಇದೇ ವಿಚಾರವಾಗಿ ಪಕ್ಷಿ ಪ್ರೇಮಿಗಳು ಹಾಗೂ ಕೆಲಸಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

‘ಪಾರಿವಾಳಗಳಿಗೆ ಆಹಾರ ಹಾಕಬೇಡಿ ಎಂದು ಹೇಳಲು ನೀವು ಯಾರು, ಯಾರದ್ದಾದರೂ ಆದೇಶ ಇದೆಯಾ, ಇದ್ದರೆ ಆದೇಶ ಪ್ರತಿ ತೋರಿಸಿ’ ಎಂದು ಪಕ್ಷಿ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ. ‘ಗುತ್ತಿಗೆದಾರ ಹೇಳಿದ್ದಕ್ಕೆ ಫಲಕ ಹಾಕಲಾಗಿದೆ’ ಎಂದಷ್ಟೇ ಕೆಲಸಗಾರರು ಹೇಳುತ್ತಿದ್ದು, ಯಾವುದೇ ಆದೇಶ ತೋರಿಸುತ್ತಿಲ್ಲ. 

‘ರೇಸ್‌ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಡಾ. ಎಂ.ಎಚ್. ಅಂಬರೀಶ್ ಹೆಸರು ಇರಿಸಲಾಗಿದೆ. ಈ ರಸ್ತೆಯಲ್ಲಿರುವ ಜಂಕ್ಷನ್‌ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಪಾರಿವಾಳಗಳು ಹೆಚ್ಚು ಕುಳಿತರೆ, ಮಲ ಹಾಗೂ ಮೂತ್ರ ವಿಸರ್ಜನೆಯಿಂದ ಗಲೀಜಾಗುತ್ತದೆ. ಹೀಗಾಗಿ, ಪಾರಿವಾಳಗಳು ಕೂರದಂತೆ ತಡೆಯಬೇಕಿದೆ. ಆಹಾರ ಸಿಗದಿದ್ದರೆ ಪಾರಿವಾಳಗಳು ಇಲ್ಲಿಗೆ ಬರುವುದಿಲ್ಲ. ಹೀಗಾಗಿ, ಆಹಾರ ಹಾಕಿದವರಿಗೆ ದಂಡ ವಿಧಿಸುವುದಾಗಿ ಫಲಕ ಹಾಕಲಾಗಿದೆ’ ಎಂದು ಕೆಲಸಗಾರರೊಬ್ಬರು ಹೇಳಿದರು.

ಆಟೊ ಚಾಲಕ ರಘುವೀರ್, ‘ಐದು ವರ್ಷಗಳಿಂದ ಈ ಸ್ಥಳದಲ್ಲಿ ಪಾರಿವಾಳಗಳ ಗುಂಪು ಇದೆ. ಅದಕ್ಕೆ ನಿತ್ಯವೂ ಆಹಾರ ಹಾಕುತ್ತಿದ್ದೇವೆ. ಈಗ ದಿಢೀರ್ ದಂಡ ವಿಧಿಸುವ ಫಲಕ ಹಾಕಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮೊಬೈಲ್‌ ನೆಟ್‌ವರ್ಕ್‌ ಹಾಗೂ ಮರಗಳ ನಾಶದಿಂದಾಗಿ ನಗರದಲ್ಲಿ ಪಕ್ಷಿಗಳ ಸಂಕುಲ ನಶಿಸುತ್ತಿದೆ. ಆದರೆ, ರೇಸ್‌ಕೋರ್ಸ್‌ ರಸ್ತೆಯಲ್ಲಿ ಪಾರಿವಾಳಗಳು ಸದಾ ಇರುತ್ತವೆ. ಅವುಗಳ ಶಬ್ದ ಕೇಳಿದರೆ ಮನಸ್ಸಿಗೆ ಹಿತವೆನಿಸುತ್ತದೆ. ಈಗ ಆಹಾರ ಹಾಕದಂತೆ ತಡೆದರೆ, ಜಂಕ್ಷನ್‌ನಲ್ಲಿ ಪಕ್ಷಿಗಳೇ ಇರುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಸ್ಥಳೀಯ ವ್ಯಾಪಾರಿ ಸೆಲ್ವಕುಮಾರ್, ‘ಐದು ವರ್ಷಗಳಿಂದ ಮಧ್ಯಾಹ್ನ ಊಟದ ಅವಧಿಯಲ್ಲಿ ಜಂಕ್ಷನ್‌ಗೆ ಬಂದು ಪಾರಿವಾಳಿಗೆ ಕಾಳು ಹಾಕುತ್ತಿದ್ದೇನೆ. ಅವುಗಳ ಜೊತೆ ಕೆಲ ನಿಮಿಷ ಕಳೆದರೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಪುನಃ ಅಂಗಡಿಗೆ ಹೋಗಿ ವ್ಯಾಪಾರ ಮುಂದುವರಿಸುತ್ತೇನೆ. ಈಗ ಆಹಾರ ಹಾಕದಂತೆ ತಡೆಯುವುದು ಯಾವ ನ್ಯಾಯ. ಪಕ್ಷಿಗಳು ಬದುಕುವುದು ಬೇಡವೇ’ ಎಂದು ಪ್ರಶ್ನಿಸಿದರು.

ಫಲಕದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗುತ್ತಿಗೆದಾರ ಹಾಗೂ ಕಾಮಗಾರಿ ಉಸ್ತುವಾರಿ ಅಧಿಕಾರಿಗಳು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT